Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆ : ನೋಡುಗರ ಬಾಯಲ್ಲಿ ನೀರೂರಿಸಿದ ತರಹೇವಾರಿ ಖಾದ್ಯಗಳು

Facebook
Twitter
Telegram
WhatsApp

ಚಿತ್ರದುರ್ಗ,ಡಿ.13 :  ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ರುಚಿ ರುಚಿಯಾದ ವಿವಿಧ ಸಿರಿಧಾನ್ಯ ಪಾಕಗಳು ನೋಡುಗರ ಬಾಯಲ್ಲಿ ನೀರೂರಿಸಿದವು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ವತಿಯಿಂದ ಬುಧವಾರ ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆ ನಡೆಯಿತು.

ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಸಿರಿಧಾನ್ಯಗಳ ಪೌಷ್ಠಿಕಾಂಶದ ಮಹತ್ವಗಳು, ಬಳಕೆಯ ವಿಧಾನಗಳು, ಆರೋಗ್ಯಕರ ಅಂಶಗಳ ಪ್ರಯೋಜನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಒಟ್ಟು 26 ಜನರು ಭಾಗವಹಿಸಿ, ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ವಿವಿಧ ಪದಾರ್ಥಗಳಾದ ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ನವಣಕ್ಕಿ ಕಲ್ಲುಂಡೆ, ನವಣಕ್ಕಿ ಬೇಸನ್ ಉಂಡೆ, ರಾಗಿ ಬೆಲ್ಲದ ಬರ್ಫಿ, ಸಿರಿಧಾನ್ಯ ಬಿಸ್ಕತ್ತು, ಸಿರಿಧಾನ್ಯ ಚುರುಮುರಿ, ಸಜ್ಜೆ ಕಡಬು, ನವಣೆ ಪೇಡಾ, ಸಾವೆ ಕಿಚಡಿ, ರಾಗಿ ಹಲ್ವ, ಬರಗು ಉಂಡೆ, ಊದಲು ಪಾಯಸ, ಸಜ್ಜೆ ಲಾಡು, ಸಾಮೆ ಬಿಸಿಬೆಳೆಬಾತ್, ಸಜ್ಜೆ ರೊಟ್ಟಿ, ನವಣಕ್ಕಿ ಬಿಸಿಬೇಳೆ ಬಾತ್, ನವಣಕ್ಕಿ ಚಿತ್ರಾನ್ನ, ನವಣಕ್ಕಿ ಚಕ್ಕುಲಿ, ಸಾವೆಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿಸಿದರು.

ಸಿರಿಧಾನ್ಯ ಖಾದ್ಯ ತಯಾರಿಕೆಗೆ ಬಳಸಿದ ಸಾಮಗ್ರಿಗಳು, ರುಚಿ, ಪ್ರದರ್ಶನ, ತೋರಿಕೆ, ಸುವಾಸನೆ, ರಚನಾ ವಿನ್ಯಾಸ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ತೀರ್ಪುಗಾರರು ಪರಿಶೀಲಿಸಿ, ಅತ್ಯುತ್ತಮ ಸಿರಿಧಾನ್ಯಗಳ ಸಿಹಿ ತಿನಿಸಿಗೆ ಹಾಗೂ ಖಾರ ತಿನಿಸಿಗೆ ಪ್ರಥಮ-5000 ರೂ., ದ್ವಿತೀಯ-3000 ರೂ. ಹಾಗೂ ತೃತೀಯ- 2000 ರೂ. ನಗದು ಬಹುಮಾನ ನೀಡಲಾಯಿತು.

ಸಿರಿಧಾನ್ಯ ಸಿಹಿ ಖಾದ್ಯದಲ್ಲಿ ಸಜ್ಜೆ ಲಾಡು ತಯಾರಿಸಿದ ಹಿರಿಯೂರು ತಾಲ್ಲೂಕು ವಿವಿ.ಸಾಗರದ ಎಸ್. ಸೂರ್ಯ ಪ್ರಥಮ ಬಹುಮಾನ ಪಡೆದರು. ರಾಗಿ ಹಲ್ವ ಖಾದ್ಯ ತಯಾರಿಸಿದ ಚಿತ್ರದುರ್ಗ ತಾಲ್ಲೂಕು ದೊಡ್ಡಸಿದ್ದವ್ವನಹಳ್ಳಿಯ ಜೆ.ವಿ.ವೀಣಾ ದ್ವಿತೀಯ ಬಹುಮಾನ ಪಡೆದರು. ನವಣಕ್ಕಿ ಕಲ್ಲುಂಡೆ ಖಾದ್ಯ ತಯಾರಿಸಿದ ಹೊಸದುರ್ಗ ತಾಲ್ಲೂಕು ಕೆರೆಹೊಸಹಳ್ಳಿಯ ಎ.ವೈ.ಓಂಕಾರಮ್ಮ ತೃತೀಯ ಬಹುಮಾನ ಪಡದರು.

ಸಿರಿಧಾನ್ಯ ಖಾರ ಖಾದ್ಯದಲ್ಲಿ ಸಿರಿಧಾನ್ಯ ಚುರುಮುರಿ ತಯಾರಿಸಿದ ಹೊಸದುರ್ಗ ತಾಲ್ಲೂಕು ಆನಿವಾಳದ ಪಿ.ಎಂ.ಸುಮಾ ಪ್ರಥಮ, ಹಾರಕ ಪಲಾವ್ ತಯಾರಿಸಿದ ಚಿತ್ರದುರ್ಗ ತಾಲ್ಲೂಕು ಚಿಕ್ಕಬೆನ್ನೂರಿನ ಬಿ.ಎಸ್.ಶಾಂತಕುಮಾರಿ ದ್ವೀತಿಯ ಹಾಗೂ ಸಜ್ಜೆ ಮಸಾಲೆ ರೊಟ್ಟಿ ತಯಾರಿಸಿದ ಚಿತ್ರದುರ್ಗ ನಗರದ ಕೆಳಗೋಟೆಯ ರಾಜೇಶ್ವರಿ ಬಡಿಗೇರ ತೃತೀಯ ಬಹುಮಾನ ಪಡೆದರು.

ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದಕ್ಕೆ ಹಾಗೂ ಸಿರಿಧಾನ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ  ಸಿರಿಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಿರಿಧಾನ್ಯಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಬೇಕು ಎಂದರು.

ಸಿರಿಧಾನ್ಯಗಳು ಹೆಚ್ಚಿನ ಪೌಷ್ಠಿಕಾಂಶ ಹೊಂದಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿ ಆಹಾರ ಧಾನ್ಯಗಳಾಗಿವೆ.  ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯ ಆಹಾರಗಳು ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ. ಆಹಾರ ಹಾಗೂ ಜೀವನ ಶೈಲಿಯಿಂದ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಹಳೆಯ ಸಂಸ್ಕøತಿ ಅಳವಡಿಸಿಕೊಂಡು ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸಿರಿಧಾನ್ಯದ ಕಡೆಗೆ ಹೆಚ್ಚಿನ ಒಲವು ಮೂಡಿಸಬೇಕು. ಪಾಶ್ಚಿಮಾತ್ಯ ದೇಶಗಳೂ ಇತ್ತೀಚೆಗೆ ಸಿರಿಧಾನ್ಯದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಸಿರಿಧಾನ್ಯ ನಮ್ಮಲ್ಲಿ ಹುಟ್ಟಿದ ಬೇರಾಗಿದ್ದು, ಹಾಗಾಗಿ ಸಿರಿಧಾನ್ಯಗಳ ಬಳಕೆಗೆ ನಮ್ಮಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಬೇಕು ಎಂದು ತಿಳಿಸಿದ ಅವರು, ನಮ್ಮ ದೇಶಿಯ ಆಹಾರ ಪದ್ದತಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯದ ಜತೆಗೆ ಸದೃಢ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ಮರೆತು ಹೋಗಿದೆ. ಸಿರಿಧಾನ್ಯಗಳು ಪೌಷ್ಠಿಕತೆಗೆ ಹೆಸರುವಾಸಿ. ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರಿನಾಂಶವಿರುತ್ತದೆ ಎಂದು ತಿಳಿಸಿದ ಅವರು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಕಡೆಗೆ ರೈತರು, ಉದ್ಯಮಿಗಳು ಗಮನಹರಿಸಬೇಕು ಎಂದರು.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಇದೇ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಖಾದ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು, ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ಸಹಾಯಕ ನಿರ್ದೇಶಕರಾದ ಚಂದ್ರಕುಮಾರ್, ಪ್ರವೀಣ್ ಚೌಧರಿ ಸೇರಿದಂತೆ ಮತ್ತಿತರರು ಇದ್ದರು. ತೀರ್ಪುಗಾರರಾಗಿ ಡಾ.ಸರಸ್ವತಿ, ಎನ್.ಸುಧಾ, ಶೋಭಾ, ಡಾ.ಬಿ.ವಿ.ಸುಧಾ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!