ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್ ಸ್ಪಷ್ಟಪಡಿಸಿದ್ದಾರೆ.
ಜುಲೈ 31 ಕೊನೆಯ ದಿನಾಂಕವಾಗಿದ್ದು, ಅಂತಿಮ ಗಡುವಿನೊಳಗೆ ರಿಟರ್ನ್ಸ್ ಬರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. 2021-22 ರ ಹಣಕಾಸು ವರ್ಷಕ್ಕೆ ಜುಲೈ 20 ರವರೆಗೆ 2.3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಮತ್ತು ಈ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಎಂದು ಬಜಾಜ್ ವಿವರಿಸಿದರು.
ಕೋವಿಡ್ ಪರಿಣಾಮ, ಐಟಿ ಪೋರ್ಟಲ್‌ನಲ್ಲಿನ ಸಮಸ್ಯೆಗಳು ಮತ್ತು ಇತರ ಅಂಶಗಳಿಂದ ಕಳೆದ ವರ್ಷ ಡಿಸೆಂಬರ್ 31 ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು. ಈ ಬಾರಿಯೂ ಅದೇ ರೀತಿ ಗಡುವು ವಿಸ್ತರಿಸಬಹುದು ನಿಧಾನವಾಗಿ ಐಟಿಆರ್‌ಗಳನ್ನು ಸಲ್ಲಿಸಬಹುದು ಎಂದು ಕೆಲವರು ಭಾವಿಸಿರಬಹುದು ಎಂದು ಬಜಾಜ್ ಹೇಳಿದ್ದಾರೆ. ಆದರೆ ಈ ಬಾರಿ ಗಡುವು ವಿಸ್ತರಿಸುವ ಯೋಜನೆ ಇಲ್ಲ. ಪ್ರಸ್ತುತ ನಿತ್ಯ 15-18 ಲಕ್ಷ ರಿಟರ್ನ್ಸ್ ಬರುತ್ತಿದ್ದರೆ, ಮುಂದಿನ ದಿನಗಳಲ್ಲಿ 25 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ವಿವರಿಸಿದರು.