ಆನೇಕಲ್: ಸಾಕಷ್ಟು ವರ್ಷಗಳಿಂದಲೂ ದಲಿತ ಸಿಎಂ ವಿಚಾರ ಆಗಾಗ ಸದ್ದು , ಗದ್ದಲ ಎಬ್ಬಿಸಿ, ಹಂಗೆ ತಣ್ಣಗಾಗಿಬಿಡುತ್ತದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ, ಕರ್ನಾಟಕ ರಾಜಕಾರಣದಲ್ಲಿ ದಲಿತ ಸಿಎಂ ಆಗುತ್ತಾನೆ ಅಂತ ಕನಸು ಕಾಣೋನು ಹುಚ್ಚ ಎಂದಿದ್ದಾರೆ.
ದಲಿತ ಸಿಎಂ ಚರ್ಚೆ ಕೇವಲ ರಾಜಕೀಯ ತೆವಲು ಅಷ್ಟೇ. ಈವರೆಗೆ ರಾಜ್ಯ ರಾಜಕಾರಣದಲ್ಲಿ ದಲಿತ ಸಿಎಂ ಯಾಕೆ ಆಗಿಲ್ಲ ಎಂಬುದಕ್ಕೆ ಈ ದೇಶದಲ್ಲಿ ಬಹಳಷ್ಟು ಉದಾಹರಣೆಗಳಿವೆ. ಸಂವಿಧಾನ ಬರೆದ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಐದು ವರ್ಷಗಳ ಕಾಲ ಮಂತ್ರಿಯಾಗಿ ಮುಂದುವರೆಯಲು ಬಿಡಲಿಲ್ಲ. ಆ ಬಳಿಕ ಅಂಬೇಡ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮನೆಗೆ ಹೋಗಿ, ಐದು ವರ್ಷ ಮುಂದುವರೆಯಿರಿ ಎಂದು ಹೇಳಲಿಲ್ಲ ಒಂದು ಕಪ್ ಟೀ ಕೂಡ ಕುಡಿಯಲಿಲ್ಲ ಎಂದಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆಯವರು ಇನ್ನೇನು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರನ್ನು ಬೇಕು ಎಂದೇ ಮಾಡಲಿಲ್ಲ. ಪರಮೇಶ್ಚರ್ ಅವರು ಇನ್ನೆಲ್ಲಿ ಮುಖ್ಯಮಂತ್ರಿಯಾಗಿ ಬಿಡುತ್ತಾರೋ ಅಂತ ಅವರನ್ನು ಸೋಲಿಸಿದರು ಎಂದು ಆನೇಕಲ್ ನ ಸಾಯಿರಾಮ್ ಕಾಲೇಜಿನಲ್ಲಿ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.