ಕೇಂದ್ರ ಬಜೆಟ್ | ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲ್ವೆ ಯೋಜನೆ ಕಾಮಗಾರಿಗೆ 300 ಕೋಟಿ ಅನುದಾನ ಮೀಸಲು

1 Min Read

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.01 : ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಒಟ್ಟು 7524 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇದರಲ್ಲಿ ತುಮಕೂರು -ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಕಾಮಗಾರಿಗೆ 300ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ಘೋಷಿಸಿದ್ದಾರೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ್ದ ಬಜೆಟ್‌ಗಿಂತ ಹೆಚ್ಚು ಹಣ ಹಂಚಿಕೆ ಮಾಡಲಾಗಿದ್ದು, ಕರ್ನಾಟಕದಲ್ಲಿ ರೈಲ್ವೆಗೆ ಸಂಬಂಧಿಸಿದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ, ನಿಲ್ದಾಣಗಳು ಮತ್ತು ರೈಲುಗಳ ಆಧುನೀಕರಣ, ಸಂಪರ್ಕದ ವರ್ಧನೆ, ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

 

ಹೊಸ ಮಾರ್ಗಕ್ಕೆ 2286 ಕೋಟಿ ರೂ. ಡಬ್ಲಿಂಗ್‌ಗೆ 1531 ಕೋಟಿ ರೂ. ಪ್ರಯಾಣಿಕರಿಗೆ ನಿರಂತರ ಉತ್ತಮ ಸೇವೆಯನ್ನು ನೀಡಲು ರೂ.987 ಕೋಟಿಗಳನ್ನು ಪ್ರಯಾಣಿಕರ ಸೌಕರ್ಯಗಳಿಗಾಗಿ ವಿನಿಯೋಗಿಸಲಾಗಿದೆ.

ಕೇಂದ್ರ ಬಜೆಟ್‌ ನಲ್ಲಿ ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಹೆಚ್ಚು ಅನುದಾನ ಸಿಗಲಿದೆ ಎನ್ನಲಾಗುತ್ತಿತ್ತು. ಕೇಂದ್ರ ರೈಲ್ವೆ ಬಜೆಟ್‌ ಕೂಡ ಸೇರಿರುವುದರಿಂದ ಕರ್ನಾಟಕದ ಹಲವಾರು ರೈಲ್ವೆ ಯೋಜನೆಗಳಿಗೆ ಈ ಬಾರಿ ಹೆಚ್ಚಿನ ಒತ್ತು ಸಿಗಬಹುದಾಗಿದೆ. ಅದರಲ್ಲೂ ಕರ್ನಾಟಕದ ರೈಲ್ವೆ ಮಾರ್ಗಗಳ ಉನ್ನತೀಕರಣ, ಹೊಸ ರೈಲುಗಳ ಮಾರ್ಗಗಳ ಬೇಡಿಕೆ, ಅನುದಾನ ಹಂಚಿಕೆ, ಹೊಸ ರೈಲುಗಳ ಆರಂಭದ ಹಲವಾರು ಬೇಡಿಕೆಗಳನ್ನು ಈಗಾಗಲೇ ರೈಲ್ವೆ ಅಧಿಕಾರಿಗಳು ಸಲ್ಲಿಸಿದ್ಧಾರೆ. ರೈಲು ಪ್ರಯಾಣಿಕರಿಂದಲೂ ಸಾಕಷ್ಟು ಬೇಡಿಕೆಗಳಿವೆ.

ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಯಾದ ತುಮಕೂರು ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲ್ವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಲವು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎನ್ನಬಹುದು.

Share This Article
Leave a Comment

Leave a Reply

Your email address will not be published. Required fields are marked *