ಚಿತ್ರದುರ್ಗ, (ಮೇ.01): ಕಾರ್ಮಿಕರ ಪರ ಕಾಯಿದೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತ ಸಾಮರಸ್ಯಕ್ಕೆ ಧಕ್ಕೆತರುವ ಕೆಲಸ ಮಾಡುತ್ತಿರುವುದರ ವಿರುದ್ದ ಎಲ್ಲರೂ ಎಚ್ಚೆತ್ತುಕೊಂಡು ಹೋರಾಟದಲ್ಲಿ ತೊಡಗಬೇಕಿದೆ ಎಂದು ಎ.ಐ.ಟಿ.ಯು.ಸಿ. ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾಂ.ಎನ್.ಶಿವಣ್ಣ ಹೇಳಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಚೇರಿ ಮುಂಭಾಗದಲ್ಲಿ ಭಾನುವಾರ ನಡೆದ ಮೇ 1 ಹಾಗೂ ಹುತಾತ್ಮರ 45 ನೇ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗೆ ಎಂಟು ಗಂಟೆಗಳ ಕಾಲ ಕೆಲಸ, ಎಂಟು ಗಂಟೆ ವಿಶ್ರಾಂತಿ ಹಾಗೂ ಎಂಟು ಗಂಟೆಗಳನ್ನು ಸಾಮಾಜಿಕ ಕೆಲಸಗಳಿಗೆ ಸೀಮಿತಗೊಳಿಸಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇಂದಿಗೂ ಕಾರ್ಮಿಕರು ಹದಿನಾರು ಗಂಟೆಗಳ ಕಾಲ ಕೆಲಸ ಮಾಡುವಂತ ಕಷ್ಟದ ಪರಿಸ್ಥಿತಿಯಿದೆ. ಅಸಂಘಟಿತ ಕಾರ್ಮಿಕರು, ಕೃಷಿಕರು, ಕಾರ್ಮಿಕರು, ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮನೆ ಕೆಲಸದವರು ಹೀಗೆ ಎಲ್ಲಾ ಬಗೆಯ ಕಾರ್ಮಿಕರ ಪರವಾಗಿ ಕಾನೂನುಗಳನ್ನು ಜಾರಿಗೆ ತರುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯಮಿಗಳ, ಬಂಡವಾಳಶಾಹಿಗಳ ಪರವಾಗಿರುವ ಕಾಯಿದೆಗಳನ್ನು ಜಾರಿಗೆ ತರುತ್ತಿರುವುದರ ವಿರುದ್ದ ಎಲ್ಲರೂ ಹೋರಾಡಬೇಕೆಂದು ಜಾಗೃತಿಗೊಳಿಸಿದರು.
ಕಾರ್ಮಿಕ ದಿನಾಚರಣೆ ಹಬ್ಬದ ರೀತಿಯಲ್ಲಿ ಆಚರಣೆಯಾಗಬೇಕು. ಕೋಮುವಾದಿಗಳು, ಮೂಲಭೂತವಾದಿಗಳು ಹಿಂದೂ-ಮುಸಲ್ಮಾನರ ನಡುವೆ ಕೋಮುಭಾವನೆ ಕೆರಳಿಸುತ್ತ ಶಾಂತಿ ಭಂಗ ಉಂಟು ಮಾಡುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿಗೆ ಅರ್ಹರಿದ್ದಾರೆಂದು ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರಗಳು ಪ್ರತಿಕ್ರಿಯಿಸಿಲ್ಲ. ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ನೀಡುವಂತೆ ಡಿ.15, 2020 ರಂದು ಅಲಹಾಬಾದ್ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದ್ದರೂ ಮೌನವಹಿಸಿವೆ. ಇಂತಹ ಅಕ್ರಮಗಳ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ ಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬುದ್ದ, ಬಸವ, ಅಂಬೇಡ್ಕರ್, ಮಹಮದ್ ಪೈಗಂಬರ್, ಏಸು, ಕಾರ್ಲ್‍ಮಾಕ್ರ್ಸ್ ಇವರುಗಳೆಲ್ಲಾ ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಜಗತ್ತಿನಾದ್ಯಂತ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿ ವರ್ಷ ಮೇ.1 ರಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
2014 ರಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ.ಸರ್ಕಾರ ಇದುವರೆವಿಗೂ ಕಾರ್ಮಿಕರ ಪರ ಕಾಯಿದೆಗಳನ್ನು ರೂಪಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಚುನಾವಣಾ ಪೂರ್ವದಲ್ಲಿಯೇ ದೇಶದ ಯುವಕರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದ ನರೇಂದ್ರಮೋದಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿದ್ದರೂ ಯಾವ ಭರವಸೆಗಳು ಇನ್ನು ಈಡೇರಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆಪಾದಿಸಿದರು.
ತನ್ನ ಹುಳುಕನ್ನು ಮುಚ್ಚಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಕೋಮುವಾದಿ ಬಿಜೆಪಿ. ಹಿಜಾಬ್, ಹಲಾಲ್, ಜಟ್ಕ್‍ಕಟ್ ವಿವಾದ ಮುಂದಿಟ್ಟುಕೊಂಡು ಜಾತಿ ಧರ್ಮಗಳ ನಡುವಿನ ಸಹಭಾಳ್ವೆಯನ್ನು ಕದಡಲು ಹೊರಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜಾಸ್ತಿಯಾಗಿದೆ. ಭಾರತ ಕಮ್ಯುನಿಸ್ಟ್ ಪಕ್ಷ ದೇಶದಲ್ಲಿ ಇಂದಲ್ಲ ನಾಳೆ ಅಧಿಕಾರಕ್ಕೆ ಬಂದೆ ಬರುತ್ತದೆ. ಇಡಿ ರಾಜ್ಯದಲ್ಲಿ 25 ಸಾವಿರ ನಿವೇಶನರಹಿತರಿಗೆ ನಿವೇಶನಗಳನ್ನು ನೀಡಿ ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ಆ.10 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಕಮ್ಯುನಿಸ್ಟ್ ಪಕ್ಷ ದೇಶದಲ್ಲಿ ನಿರಂತರವಾಗಿ ಕಾರ್ಮಿಕರ ಪರ ಹೋರಾಟ ಮಾಡುತ್ತಿದೆ. ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಪ್ರಬಲವಾಗಿ ಕಟ್ಟಬೇಕಾಗಿರುವುದರಿಂದ ಸದಸ್ಯತ್ವ ಪಡೆಯುವಂತೆ ವಿವಿಧ ವಲಯಗಳ ಕಾರ್ಮಿಕರಲ್ಲಿ ಮನವಿ ಮಾಡಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಎ.ಪಿ.ಎಂ.ಸಿ.ಹಮಾಲರಿಗೆ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ, ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು ಐದು ಸಾವಿರ ರೂ.ಗಳ ಪಿಂಚಣಿಯನ್ನು ಸರ್ಕಾರ ಕೂಡಲೆ ಬಿಡುಗಡೆಗೊಳಿಸಬೇಕು. ಅನೇಕ ವರ್ಷಗಳಿಂದಲೂ ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇವಾ ಭದ್ರೆಯಿಲ್ಲದೆ ಗೌರವ ಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಎ.ಪಿ.ಎಂ.ಸಿ.ಯಲ್ಲಿ ಹಮಾಲರಿಗಾಗಿ ನಿರ್ಮಿಸಲಾಗಿರುವ 133 ಮನೆಗಳಿಗೆ ತುರ್ತಾಗಿ ವಿದ್ಯುತ್ ಪೂರೈಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಎ.ಐ.ಟಿ.ಯು.ಸಿ.ಜಿಲ್ಲಾಧ್ಯಕ್ಷ ಬಿ.ಬಸವರಾಜ್, ಜಿಲ್ಲಾ ಖಜಾಂಚಿ ಕಾಂ.ಟಿ.ಆರ್.ಉಮಾಪತಿ, ದೊಡ್ಡಉಳ್ಳಾರ್ತಿ ಕರಿಯಣ್ಣ, ಕಾಂ.ಜಯದೇವಮೂರ್ತಿ, ಕಾಂ.ಜಮುನಾಬಾಯಿ, ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಕಾಂ.ಈ.ಸತ್ಯಕೀರ್ತಿ, ಜಿಲ್ಲಯ ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.
ಮಾಳಪ್ಪನಹಟ್ಟಿಯ ಕುರಿನಾಗರಾಜ್ ಕಾರ್ಮಿಕರ ಮಕ್ಕಳಿಗೆ ನೀಡಿದ ನೋಟ್‍ಬುಕ್‍ಗಳನ್ನು ಮೇ ದಿನಾಚರಣೆಯಲ್ಲಿ ವಿತರಿಸಲಾಯಿತು.