ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿಲ್ಲ : ಸಿದ್ದನಗೌಡ ಪಾಟೀಲ್

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.15  : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಕರೆ ನೀಡಿದರು.

ಎ.ಪಿ.ಎಂ.ಸಿ. ರೈತ ಭವನದಲ್ಲಿ ಗುರುವಾರ ನಡೆದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹರಿಯಾಣ, ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ದೆಹಲಿಯಲ್ಲಿ ಚಳುವಳಿ ನಡೆಸಿದಾಗ ಪೊಲೀಸರು ಅಶ್ರುವಾಯು, ಜಲಪಿರಂಗಿ ಪ್ರಯೋಗಿಸಿದರೂ ರೈತರು ಜಗ್ಗಲಿಲ್ಲ. ನೂರಾರು ರೈತರು ಪ್ರಾಣ ಕಳೆದುಕೊಂಡರು. ಬೆಳಗಾವಿಯ ಸುವರ್ಣಸೌಧದ ಎದುರು ಚಳುವಳಿ ಮಾಡಿದ್ದೇವೆ.

ರಾಜ್ಯದಲ್ಲಿ ನಾಲ್ಕು ಲಕ್ಷ ಪಂಪ್‍ಸೆಟ್‍ಗಳಿವೆ. ರೈತರ ಪಂಪ್‍ಸೆಟ್ ಟಿಸಿ ಸುಟ್ಟರೆ ಸರ್ಕಾರ ಫ್ರಿಯಾಗಿ ಕೊಡುತ್ತಿತ್ತು. ಈಗ ರೈತರೆ ರಿಪೇರಿ ಮಾಡಿಸಿಕೊಳ್ಳಬೇಕೆಂಬ ಕಾನೂನು ತಂದಿದೆ. ಸ್ಪಿಂಕ್ಲರ್ ಸೆಟ್‍ಗಳಿಗೆ ನಾಲ್ಕು ಸಾವಿರ ರೂ.ಗಳನ್ನು ನಿಗಧಿಪಡಿಸಿರುವುದು ಮೊದಲೆ ಬರಗಾಲದಲ್ಲಿರುವ ರೈತರ ಮೇಲೆ ಬರೆ ಎಳೆದಂತಾಗಿದೆ. ಮುಂದಿನ ಹೋರಾಟಕ್ಕೆ ಸಿದ್ದರಾಗೋಣ ಎಂದು ಹೇಳಿದರು.

ಅಖಂಡ ಕರ್ನಾಟಕ ರೈತ ಸಂಘ ಯಾರೊಡನೆಯೂ ಸೇರಿಕೊಳ್ಳುವುದಿಲ್ಲ. ವಯಸ್ಸಾಗಿದ್ದರೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುತ್ತಾಡಿದ್ದೇನೆ. ಸುಮ್ಮನೆ ಕೂತಿಲ್ಲ. ಕೇಂದ್ರ ರಾಜ್ಯ ಸರ್ಕಾರದ ತಿಕ್ಕಾಟದಲ್ಲಿ ರೈತರು ಸಾಯುವಂತಾಗಿದೆ. ಹಾಗಾಗಿ ರೈತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದಾಗಬೇಕು. ಬೆಳೆ ಪರಿಹಾರ, ಬೆಳೆ ವಿಮೆ ಇನ್ನು ರೈತರ ಕೈಸೇರಿಲ್ಲ. ನಮ್ಮ ಸಂಘದ ಅಸ್ತಿತ್ವ ಕಳೆಯಬಾರದು. ಬಾಬಾಗೌಡ ಪಾಟೀಲರ ಮಾರ್ಗದರ್ಶನದಂತೆ ಎಲ್ಲರೂ ಸಾಗೋಣ. ರೈತ ಮಕ್ಕಳಿಗೆ ಕನ್ಯೆ ಕೊಡಲು ಯಾರು ಮುಂದೆ ಬರುತ್ತಿಲ್ಲ. ಅದಕ್ಕಾಗಿ ರೈತ ಮಕ್ಕಳನ್ನು ವಿವಾಹವಾದ ಹೆಣ್ಣಿನ ಹೆಸರಿನಲ್ಲಿ ಐದು ಲಕ್ಷ ರೂ.ಗಳನ್ನು ಸರ್ಕಾರ ಡಿಪಾಸಿಟ್ ಮಾಡಬೇಕು. ಆರನೆ ಗ್ಯಾರೆಂಟಿಯಾಗಿ ಇದನ್ನು ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಇನ್ನು ಎಂಟು ದಿನದಲ್ಲಿ ಮತ್ತೊಂದು ಸಭೆ ಸೇರೋಣ ಎಂದು ತಿಳಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ ನಮ್ಮ ಸಂಘ ಒಡೆಯಬಾರದು. ಹಳೆಬರೆಲ್ಲಾ ದೂರ ಆಗಿದ್ದಾರೆ. ಜಿಲ್ಲಾ ಕಮಿಟಿ ರಚನೆಯಾಗಬೇಕು. ಹೊಸ ಹೊಸ ಕಮಿಟಿಗಳನ್ನು ರಚಿಸಿದಾಗ ಮಾತ್ರ ರೈತ ಸಂಘಕ್ಕೆ ಶಕ್ತಿ ಬಂದಂತಾಗುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಸಭೆಗಳಾಗಬೇಕು. ಅಖಂಡ ಕರ್ನಾಟಕ ರೈತ ಸಂಘ ಹೋಳಾಗಲು ಬಿಡಲ್ಲ. ಕಟ್ಟಿ ಬೆಳೆಸೋಣ. ಯಾವ ರೈತನಿಗೂ ಅನ್ಯಾಯವಾಗಬಾರದು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವತನಕ ಹೋರಾಡೋಣ. ರೈತರಲ್ಲದವರು, ರೈತ ಸಂಘದ ತತ್ವ ಸಿದ್ದಾಂತಗಳೆ ಗೊತ್ತಿಲ್ಲದವರು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷನಾಗಲು ಬಂದರೆ ಅಂತವರಿಗೆ ಜಾಗವಿಲ್ಲ ಎಂದು ಎಚ್ಚರಿಸಿದರು.

ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿ ಇದುವರೆವಿಗೂ ಹಣ ಬಿಡುಗಡೆಗೊಳಿಸಿಲ್ಲ. ಇದರಿಂದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಯುವುದು ಯಾವಾಗ? ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ರೈತರನ್ನು ವಂಚಿಸುತ್ತಲೆ ಬರುತ್ತಿವೆ. ಇನ್ನಾದರೂ ರೈತರು ಎಚ್ಚೆತ್ತುಕೊಂಡು ಸರ್ಕಾರಗಳಿಗೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಜೆ.ಮೇಘರಾಜ್ ಹಳಿಯೂರು, ಕುರುಬರಹಳ್ಳಿ ಶಿವಣ್ಣ, ಬಸ್ತಿಹಳ್ಳಿ ನಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಎಸ್.ಎಂ.ಶಿವಕುಮಾರ್, ಎನ್.ಜಿ.ಷಣ್ಮುಖಪ್ಪ, ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ಸತೀಶ್‍ರೆಡ್ಡಿ, ಮೈಸೂರಿನ ನಿಂಗಮ್ಮ, ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *