ಬೆಂಗಳೂರು: ಇಂದು ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಲ್ಲಿ ಹಲವು ಕ್ಷೇತ್ರಗಳಿಗೆ ರಿಯಾಯಿತಿಯನ್ನು ನೀಡಿದ್ದಾರೆ. ಈ ಬಜೆಟ್ ಬಗ್ಗೆ ಬಿಜೆಪಿ ನಾಯಕರು ಸಪೋರ್ಟ್ ಮಾಡಿಕೊಂಡಿದ್ದು, ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಕ್ಕೂ ಈ ಬಜೆಟ್ ನಿಂದ ಪ್ರಯೋಜನವಾಗಿಲ್ಲ. ಕರ್ನಾಟಕಕ್ಕಂತೂ ಬಾರೀ ಅನ್ಯಾಯವಾಗಿದೆ. ಕೈಗಾರಿಕೆ, ರೈಲ್ವೇ ಸೇರಿ ಯಾವುದೇ ಕ್ಷೇತ್ರಕ್ಕೂ ಹೆಚ್ಚಿನ ಅನುದಾನವನ್ನು ನೀಡಿಲ್ಲ. ರಾಯಚೂರಿನಲ್ಲಿ ಒಂದು ಏಮ್ಸ್ ನಿರ್ಮಿಸಿ ಎಂದು ಎಷ್ಟು ವರ್ಷಗಳಿಂದ ಕೇಳಿದರೂ, ಕರ್ನಾಟಕಕ್ಕೆ ಬಜೆಟ್ ನಿಂದ ಏನು ಸಿಕ್ಕಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಬಜೆಟ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು, ಎನ್‌ಡಿಎ ಸರ್ಕಾರ ಉಳಿಸಿಕೊಳ್ಳಲು ಮಂಡಿಸಿರುವ ಬಜೆಟ್ ಇದಾಗಿದೆ. ಕರ್ನಾಟಕಕ್ಕೆ ಯಾವುದೇ ನೆರವು ನೀಡದೆ ಅವರ ಮೇಲಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ಪ್ರಧಾನಿ ಹಾಗೂ ನಿರ್ಮಲಾ ಸೀತರಾಮನ್ ಅವರ ಮೇಲೆ ನಾನು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ ಎಂದಿದ್ದಾರೆ.
ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಬಜೆಟ್ ಬಗ್ಗೆ ಹೊಗಳಿದ್ದು, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಮಹತ್ವದ ಯೋಜನಗಳಿಗೆ ಹಾಗೂ ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ವಿಕಸಿತ ಭಾರತಕ್ಕೆ ಶಕ್ತಿ ತುಂಬುವ, ಮಹಿಳೆಯರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ ಎಂದು ಹೊಗಳಿದ್ದಾರೆ.
ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ದಿಗಾಗಿ 1.48 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಘೋಷಣೆ ಮಾಡುವ ಮೂಲಕ ನರೇಂದ್ರ ಮೋದಿ ಅವರ ಸಂಕಲ್ಪದ ವಿಕಸಿತ ಭಾರತ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ. ಬಡತನ ನಿರ್ಮೂಲನೆ, ರೈತರ ಏಳಿಗೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ರೈತರು ಹಾಗೂ ಸ್ತ್ರಿ ಕುಲದ ಬಗೆಗಿನ ಅದಮ್ಯ ವಿಶ್ವಾಸ್ ಸಂಕೇತವಿದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.