ಭದ್ರಾ ಮೇಲ್ದಂಡೆಗೆ ಅನುದಾನ ನೀಡದ ಕೇಂದ್ರ : ಮಾಜಿ ಸಚಿವ ಎಚ್.ಆಂಜನೇಯ

3 Min Read

ಚಿತ್ರದುರ್ಗ: ಫೆ.02 : ದೇಶದ ಎಲ್ಲ ರಾಜ್ಯ, ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆ, ಹಸಿದ ಹೊಟ್ಟೆಗೆ ಅನ್ನ, ದುಡಿಯುವ ಕೈಗೆ ಉದ್ಯೋಗ, ಹಿಂದುಳಿದ ಪ್ರದೇಶಗಳ ಪ್ರಗತಿಗೆ ಆದ್ಯತೆ, ತೆರಿಗೆ ಪಾವತಿಸುವ ರಾಜ್ಯಗಳಿಗೆ ಅನ್ಯಾಯವಾಗದ ರೀತಿ ಅನುದಾನ ಹಂಚಿಕೆ. ಇಷ್ಟೇಲ್ಲ ಅಂಶಗಳನ್ನು ಕೈಬಿಟ್ಟು ತಾರತಮ್ಯ ನೀತಿ ಅಳವಡಿಸಿಕೊಂಡು ಮಂಡಿಸಿರುವುದನ್ನು ಬಜೆಟ್ ಎಂದು ಹೇಗೆ ಕರೆಯಲು ಸಾಧ್ಯ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನೀಸಿದ್ದಾರೆ.

ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದಿನ ಹಾಗೂ ಈಗಿನ ಬಜೆಟ್ ಅವಲೋಕಿಸಿದರೆ ಇದನ್ನು ಬಜೆಟ್ ಎಂದು ಭಾವಿಸಲು ಅಸಾಧ್ಯ. ಇದೊಂದು ಅಧಿಕಾರ ಉಳಿಸಿಕೊಳ್ಳಲು, ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳ ವಿರುದ್ಧ ದ್ವೇಷಕಾರುವ ಪತ್ರವಾಗಿದೆ ಎಂದು ದೂರಿದ್ದಾರೆ.

ಕಾಂಗ್ರೆಸ್, ಜನತಾದಳ, ಈ ಹಿಂದಿನ ಬಿಜೆಪಿ ಸರ್ಕಾರದ ವಾಜಪೇಯಿ ಸರ್ಕಾರ, ರಾಜಕಾರಣದ ಮಧ್ಯೆಯೂ ಎಲ್ಲ ರಾಜ್ಯಗಳ ಹಿತ ಬಯಸುವ ರೀತಿ ಬಜೆಟ್ ಮಂಡಿಸುತ್ತಿದ್ದರು. ಅದರಲ್ಲೂ ಮನಮೋಹನ್ ಸಿಂಗ್ ಸರ್ಕಾರದ ಬಜೆಟ್‌ಗಳು ರಾಜಕೀಯ ರಹಿತ, ಅಭಿವೃದ್ಧಿ ಪರ ಯೋಜನೆಗಳನ್ನು ಒಳಗೊಂಡು ಆಯವ್ಯಯ ಮಂಡಿಸಲಾಗುತ್ತಿತ್ತು.
ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಬಜೆಟ್ ಮಂಡನೆಯಲ್ಲೂ ದ್ವೇಷ ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಈ ಭಾರಿಯ ಬಜೆಟ್ ಎಂದಿದ್ದಾರೆ.

ಎನ್‌ಡಿಎ ಹೊರತುಪಡಿಸಿದ ಪಕ್ಷಗಳು ಅಧಿಕಾರ ನಡೆಸುತ್ತಿರುವ ಕರ್ನಾಟಕ, ತಮಿಳುನಾಡು, ಪಶ್ಚಿಮಬಂಗಾಲ, ತೆಲಂಗಾಣ ಹೀಗೆ ಅನೇಕ ರಾಜ್ಯಗಳಿಗೆ ಪುಡಿಗಾಸು ನೀಡದೆ ವಂಚಿಸಲಾಗಿದೆ. ಅಧಿಕಾರಕ್ಕಾಗಿ ಬಿಹಾರ, ಆಂಧ್ರಪ್ರದೇಶ ರಾಜ್ಯಗಳಿಗೆ ಭರಪೂರ ಯೋಜನೆ, ದುಡ್ಡು ನೀಡಲಾಗಿದೆ. ಈ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸಲಾಗಿದೆ. ಕನ್ನಡಿಗರನ್ನೇ ಮರೆತ ಮೊದಲ ಬಜೆಟ್ ಎಂಬ ಅಪಕೀರ್ತಿಗೆ ಒಳಗಾಗಿದೆ. ಈ ಮೂಲಕ ಮಹನೀಯರ ಆಶಯಗಳಿಗೆ ಎಳ್ಳುನೀರು ಬಿಟ್ಟ ಬಜೆಟ್ ಆಗಿದೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಡಬಲ್ ಇಂಜಿನ್ ಸರ್ಕಾರದಲ್ಲೂ ಅನ್ಯಾಯ ಮಾಡಲಾಗಿದ್ದು, ಅದನ್ನು ಈಗಲೂ ಮುಂದುವರಿಸಲಾಗಿದೆ ಎಂದಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭ ಮಂಡಿಸಿದ್ದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗಾಗಿ ಘೋಷಿಸಿದ್ದ 5,300 ಕೋಟಿ ರೂಪಾಯಿ ನೀಡಲು ಸತಾಯಿಸುತ್ತಿದ್ದ ಕೇಂದ್ರ ಸರ್ಕಾರ, ಈಗ ತಾನೇ ಘೋಷಣೆ ಮಾಡಿದ್ದ ಅನುದಾನದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸದೆ ತೀವ್ರ ವಂಚನೆ ಮಾಡಲಾಗಿದೆ. ಜೊತೆಗೆ ರಾಷ್ಟ್ರೀಯ ಯೋಜನೆ ಎಂಬುದು ಸಾಧ್ಯವೇ ಇಲ್ಲವೆಂಬ ಸಂದೇಶ ಬಿಜೆಪಿ ಸರ್ಕಾರ ರವಾನಿಸಿದೆ ಎಂದು ದೂರಿದ್ದಾರೆ.

ಚುನಾವಣೆ ಸಂದರ್ಭ ಚಿತ್ರದುರ್ಗ ಜಿಲ್ಲೆಗೆ ಪ್ರಚಾರಕ್ಕೆ ಆಗಮಿಸಿದ್ದ ಮೋದಿ ಸೇರಿದಂತೆ ಎಲ್ಲ ನಾಯಕರು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈಗ ಅವೆಲ್ಲವನ್ನೂ ಮರೆತು ಚಿತ್ರದುರ್ಗ ಜಿಲ್ಲೆ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿನ ಬಿಜೆಪಿ ನಾಯಕರು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕಿತ್ತಾಡಿಕೊಂಡಿದ್ದು, ರಾಜ್ಯದ ಹಿತ ಮರೆತಿದ್ದಾರೆ. ಜೊತೆಗೆ ನರೇಂದ್ರ ಮೋದಿ ಬಳಿ ಹೋಗಿ ರಾಜ್ಯಕ್ಕೆ ಅನುದಾನ ಕೇಳಿ ತರುವಷ್ಟು ಶಕ್ತಿ ಇಲ್ಲದವರಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿನ ಬಿಜೆಪಿ ಸಂಸದರು ಕೇವಲ ನೇಪ ಮಾತ್ರ ಕ್ಷೇತ್ರದ ಪ್ರತಿನಿಧಿಗಳಾಗಿದ್ದಾರೆ. ಇವರ ಮಾತುಗಳನ್ನು ಕೇಂದ್ರ ನಾಯಕರು ಕಿವಿಗೆ ಹಾಕಿಕೊಳ್ಳುವುದಿಲ್ಲವೆಂಬುದಕ್ಕೆ ಈ ಬಾರಿಯ ಬಜೆಟ್ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆ, ರಾಜ್ಯಕ್ಕೆ ಆಗಿರುವ ಅನ್ಯಾಯ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ತರಲು ಹೋರಾಟವೊಂದೇ ಏಕೈಕ ಮಾರ್ಗವಾಗಿದ್ದು, ಈ ಸಂಬಂಧ ಜಿಲ್ಲೆಯ ಜನರು ಧ್ವನಿಯೆತ್ತಬೇಕಾಗಿದೆ. ಬಿಜೆಪಿ ಮುಖಂಡರಿಗೆ ಘೆರಾವ್ ಹಾಕುವ ಮೂಲಕ ನಮ್ಮ ಪಾಲಿನ ಹಕ್ಕು ಪಡೆದುಕೊಳ್ಳುವ ಪ್ರಯತ್ನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಲ್ಲಲಿದೆ, ಸಂದರ್ಭ ಎದುರಾದರೆ ಹೋರಾಟಕ್ಕೂ ಸಿದ್ಧ ಎಂದು ಎಚ್. ಆಂಜನೇಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *