ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಜನವರಿ,19): ತಾಲ್ಲೂಕಿನ ತುರುವನೂರು ಹೋಬಳಿ ಚಿಕ್ಕಗೊಂಡನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವತಿಯಿಂದ ಚಿಕ್ಕಗೊಂಡನಹಳ್ಳಿಯಲ್ಲಿ ಗುರುವಾರ ಕಲಿಕಾ ಚೇತರಿಕೆಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಎರಡು ದಿನಗಳ ‘ಕಲಿಕಾ ಹಬ್ಬದ’ ಉದ್ಘಾಟನೆಯನ್ನು ಚಿಕ್ಕಗೊಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪಮ್ಮ ಸಿದ್ದಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಲಿಕಾ ಹಬ್ಬದ ಪರಿಕಲ್ಪನೆ ಕೋವಿಡ್ ಕಾರಣದಿಂದ ಕಲಿಕೆಯ ಕೊರತೆ ನೀಗಿಸುವ ಸಲುವಾಗಿ ಕಲಿಕೆ ನಲಿಯುತ, ಹಾಡುತ್ತಾ, ಉತ್ಸಾಹದಿಂದ ಆಗಬೇಕು.
ದೇಶದಲ್ಲಿಯೇ ಪ್ರಥಮವಾಗಿ ನಮ್ಮ ರಾಜ್ಯದಲ್ಲಿ ಆಚರಿಸಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನೋಡೆಲ್ ಅಧಿಕಾರಿ ಹಾಗೂ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಜಾನಪದ ಕಲಾಮೇಳ, ಕುಂಭಮೇಳ, ಎತ್ತಿನ ಬಂಡಿ ಜಾಥಾ, ಟ್ರಾಕ್ಟರ್ ಜಾಥಾ, ಬೈಕ್ ರ್ಯಾಲಿ ಮುಂತಾದವು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು.
ಕಲಿಕಾ ಹಬ್ಬದಲ್ಲಿ ಕ್ಲಸ್ಟರ್ ವ್ಯಾಪ್ತಿಯ 12 ಶಾಲೆಗಳ 120 ಮಕ್ಕಳು ಹಾಡು-ಆಡು, ಕಾಗದ-ಕತ್ತರಿ-ಬಣ್ಣ, ಮಾಡು-ಆಡು, ಊರು ತಿಳಿಯೋಣ ಮುಂತಾದ ಚಟುವಟಿಕೆಗಳು ಈ ಹಬ್ಬದಲ್ಲಿ ಮಕ್ಕಳು ಕಲಿಯಲು ಆಸಕ್ತಿ ತೋರುತಿದ್ದುದ್ದು ಕಂಡುಬಂದಿತು.
ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸುಬ್ರಹ್ಮಣ್ಯ ನಾಯ್ಕ್, ಮಲ್ಲಿಕಾರ್ಜುನ, ಕುಸುಮ, ರೀಟಾ, ತಿಪ್ಪೇಸ್ವಾಮಿ ಅವರು ಮಕ್ಕಳಿಗೆ ಚಟುವಟಿಕೆಗಳು ತರಬೇತಿ ನೀಡಿದರು. ಶಿಕ್ಷಕರು ಕಲಾಮೇಳಗಳ ನಿರ್ವಹಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಮಾಡನಾಯಕಹಳ್ಳಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎನ್.ಆರ್.ಶಶಿಧರ್, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಪ್ರೌಢಶಾಲಾ ಸಹ ಶಿಕ್ಷಕರು, ಗ್ರಾಮಸ್ಥರು ಇದ್ದರು.