ಬೆಂಗಳೂರು: ಇಂದು ಬಿಜೆಪಿ ಪಕ್ಷದಿಂದ ಜನಸ್ಪಂದನಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಉಮೇಶ್ ಕತ್ತಿ ಅವರ ಸಾವಿನ ವಿಚಾರ ತೆಗೆದು ಟ್ವೀಟ್ ಮಾಡಿದ್ದಾರೆ.
ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ ‘ಸ್ಪಂದನೆ’ ಇಲ್ಲದಾಗಿದೆ ಬಿಜೆಪಿಗೆ ಎಂದು ಪ್ರತಿಯೊಂದು ಟ್ವೀಟ್ ಗೂ #brastotsava ಹ್ಯಾಶ್ ಟ್ಯಾಗ್ ಬಳಕೆ ಮಾಡಿದೆ.
40% ಕಮಿಷನ್ ಹಣದಲ್ಲಿ ನಡೆಯುತ್ತಿರುವ ಬಿಜೆಪಿ ಭ್ರಷ್ಟೋತ್ಸವಕ್ಕೆ ಕೋಟಿ ಕೋಟಿ ಸುರಿಯಲಾಗುತ್ತಿದೆ. ಸಮಾವೇಶದ ವೇದಿಕೆ ಅಲಂಕಾರದ ಖರ್ಚಿನಲ್ಲಿ ಮೃತ ಅಂಕಿತಾಳಿಗೆ ಪರಿಹಾರ ನೀಡಬಹುದಿತ್ತು. ಹಾಡು, ನೃತ್ಯಗಳ ಖರ್ಚಿನಲ್ಲಿ ಬೆಂಗಳೂರಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು. ರಸ್ತೆ ಗುಂಡಿಗೆ ಬಲಿಯದವರಿಗೆ ಪರಿಹಾರ ನೀಡಬಹುದಿತ್ತು.
ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ!
ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ ಬಿಜೆಪಿ ಸರ್ಕಾರ. ಇದು ಲಜ್ಜೆಗೇಡಿತನದ ಪರಮಾವಧಿ. ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ.
◆ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ?
◆ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ?
◆ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ?
◆40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ?
ಸಚಿವ “ಮನಿ”ರತ್ನರವರ 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲದಾಗಿದೆ. ತೋಟಗಾರಿಕಾ ಇಲಾಖೆಯ ಹನಿ ನೀರಾವರಿ ಗುತ್ತಿಗೆದಾರರಷ್ಟೇ ಅಲ್ಲ, ಇತರ ಕಾಮಗಾರಿಗಳಲ್ಲೂ ಅಧಿಕಾರಿಗಳಿಗೆ ಕಮಿಷನ್ ಪಡೆಯುವ ಟಾಸ್ಕ್ ನೀಡಿದ್ದು ಸಚಿವ ಮುನಿರತ್ನರ ಸಾಧನೆ. ಈ ಸಾಧನೆಗಾಗಿಯೇ ಬಿಜೆಪಿ ಭ್ರಷ್ಟೋತ್ಸವ ನೃತ್ಯ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದೆ.