Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಸವಜಯಂತಿಯಂತೆ ಈದ್ ಆಚರಿಸಿ ಶಾಂತಿ ಮರು ಸ್ಥಾಪನೆಗೆ ಒತ್ತಾಯ..!

Facebook
Twitter
Telegram
WhatsApp

ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಬಗ್ಗೆ ಕಾಳಜಿ ಹಾಗೂ ನಾಡನ್ನು “ಸರ್ವ ಜನಾಂಗದ ಶಾಂತಿಯ ತೋಟ”ವಾಗಿ ತುರ್ತಾಗಿ ಮರುಸ್ಥಾಪಿಸುವುದರ ಬಗ್ಗೆ ಸಾಹಿತಿಗಳು, ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಸರ್ಕಾರವು ಪವಿತ್ರ ರಂಜಾನ್ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಆಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೆ ಅದು ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಒಂದು ತಿಂಗಳಿಂದ ತಮ್ಮನ್ನು ಭೇಟಿ ಮಾಡಿ ಈ ಕೆಳಕಂಡ ಪತ್ರವನ್ನು ಸಲ್ಲಿಸಲು ತಮ್ಮ ಕಚೇರಿಯ ಮೂಲಕ ಪ್ರಯತ್ನಿಸಿದ್ದೇವೆ. ನಮ್ಮ ಪ್ರಯತ್ನಗಳು ವಿಫಲವಾಗಿರುವುದರಿಂದ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಕೂಡಿರುವ ಈ ಪತ್ರವನ್ನು ಬಹಿರಂಗ ಪತ್ರವನ್ನಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಕಾಳಜಿಗಳನ್ನೂ ಸಲಹೆಗಳನ್ನೂ ತಮ್ಮ ಗಮನಕ್ಕೆ ತರುವುದು ನಾಗರಿಕರಾಗಿ ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ತಾವು ಹಾಗೂ ತಮ್ಮ ಸರ್ಕಾರವು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸುವಿರೆಂದು ನಂಬಿದ್ದೇವೆ ಎಂದು ಗಿರೀಶ್ ಕಾಸರವಳ್ಳಿ, ಎಂ.ಡಿ ಪಲ್ಲವಿ, ವೈದೇಹಿ,ಬಿ.ಸುರೇಶ್, ಹೆಚ್.ಎಸ್ ಅನುಪಮ, ಡಾ.ತೇಜಸ್ವಿನಿ ನಿರಂಜನ್, ನಂಜರಾಜ್ ಅರಸ್ ಸೇರಿದಂತೆ 75 ಜನ ಸಾಹಿತಿಗಳು, ಚಿಂತಕರು, ಬರಹಗಾರರು, ನಿವೃತ್ತ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ನಾವು ಕರ್ನಾಟಕದಲ್ಲಿ ನೆಲೆಸಿರುವ ವಿವಿಧ ಕ್ಷೇತ್ರ ಮತ್ತು ವೃತ್ತಿಗಳಿಗೆ ಸೇರಿದ ಸಾರ್ವಜನಿಕ ಕಳಕಳಿಯುಳ್ಳ ನಾಗರೀಕರಾಗಿದ್ದೇವೆ. ಶಾಂತಿ, ಸಹಬಾಳ್ವೆ, ವೈವಿದ್ಯತೆ, ಬಹುತ್ವಕ್ಕೆ ಹೆಸರಾಗಿದ್ದ ಈ ನಾಡಿನಲ್ಲಿ ಇವುಗಳನ್ನೆಲ್ಲ ನಾಶಗೊಳಿಸುವಂತಹ ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಲಕ್ಷಾಂತರ ನಾಗರಿಕರಂತೆ ನಾವೂ ಸಹ ತೀವ್ರವಾಗಿ ವ್ಯಾಕುಲಗೊಂಡಿದ್ದೇವೆ. ಇಂಥ ತಪ್ಪು ನಡೆಗಳನ್ನು ಸರಿಪಡಿಸಲು ಈಗಲೂ ಅವಕಾಶವಿದ್ದು ಅದಕ್ಕೆ ಅಗತ್ಯವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ನಾಗರಿಕರಾದ ನಮ್ಮ ಕರ್ತವ್ಯವೆಂದು ಭಾವಿಸಿ ಈ ಪತ್ರವನ್ನು ತಮಗೆ ಸಲ್ಲಿಸುತ್ತಿದ್ದೇವೆ. ಕೋಮು ಸೌಹಾರ್ದತೆಯ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಭವ್ಯ ಪರಂಪರೆಯಿದೆ. 1956 ರಲ್ಲಿ ಕರ್ನಾಟಕ ಏಕೀಕರಣವಾಯಿತು. ಆದರೆ ಕರ್ನಾಟಕದ ಮತೀಯ ಸೌಹಾರ್ದತೆಯ ಇತಿಹಾಸ ಇದಕ್ಕಿಂತಲೂ ಹಳೆಯದು. ಹನ್ನೆರಡನೆಯ ಶತಮಾನದಲ್ಲಿಯೇ ಕವಿ-ದಾರ್ಶನಿಕ ಬಸವಣ್ಣನವರ ಪ್ರಯತ್ನಗಳಿಂದಾಗಿ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯಲ್ಲಿ ನಮ್ಮ ಕನ್ನಡ ನಾಡು ಸೌಹಾರ್ದತೆಯ ಇತಿಹಾಸವನ್ನೇ ನಿರ್ಮಿಸಿದೆ. ಸಮ್ಮಿಶ್ರ ಸಂಪ್ರದಾಯಗಳಿಗೆ, ಹಿಂದು ಮುಸ್ಲಿಂರನ್ನು ಒಳಗೊಂಡಂತೆ ಜನಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆಗೆ ನಮ್ಮ ನಾಡಿನ ಇತಿಹಾಸ ಸಾಕ್ಷಿಯಾಗಿದೆ. ಈ ಭವ್ಯ ಪರಂಪರೆಯ ಹಿನ್ನೆಲೆಯಲ್ಲೇ ನಮ್ಮ ರಾಷ್ಟ್ರಕವಿ ಕುವೆಂಪುರವರು ನೂರು ವರ್ಷಗಳಷ್ಟು ಹಿಂದೆಯೇ ಈ ನಾಡನ್ನು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಬಣ್ಣಿಸಿದ್ದಾರೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದ ಈ ಮುಕ್ತ ಮನಸ್ಸಿನ ಹಲನಡಾವಳಿಯ, ಸಂಸ್ಕೃತಿಯೇ ಈ ಕಾಲಘಟ್ಟದಲ್ಲಿ ಸೃಜನಶೀಲ ಮತ್ತು ಹೊಸತನ್ನರಸುವ ವ್ಯಕ್ತಿಗಳನ್ನು ರಾಷ್ಟ್ರದ ಎಲ್ಲೆಡೆಯಿಂದ ಸೂಜಿಗಲ್ಲಿನಂತೆ ಆಕರ್ಷಿಸಿದೆ. ಭಾರತದ ವಿವಿಧ ಪ್ರಾಂತ್ಯಗಳಿಗೆ ಸೇರಿದ ವಿಭಿನ್ನ ಜನಸಮುದಾಯಗಳ ಜನರು ಕರ್ನಾಟಕಕ್ಕೆ ಅಪಾರ ಸಂಖ್ಯೆಯಲ್ಲಿ ವಲಸೆ ಬಂದು ಇಲ್ಲಿ ನೆಲೆಸಿ ನಮ್ಮ ರಾಜ್ಯದ ಸಮೃದ್ಧ ವೈವಿಧ್ಯಮಯ ಸಂಸ್ಕೃತಿಯನ್ನು ಮೆಚ್ಚಿ ತಮ್ಮ ಬದುಕಿನಲ್ಲೂ ಅವುಗಳನ್ನು ಅಳವಡಿಸಿಕೊಂಡಿದ್ದಾರೆ. ತನ್ಮೂಲಕ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಅರೋಗ್ಯ ರಕ್ಷಣೆ, ಉದ್ಯಮಶೀಲತೆ, ಸಾಹಿತ್ಯ, ಕಲೆ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಚೈತನ್ಯಶೀಲ ರಾಜ್ಯವನ್ನಾಗಿ ರೂಪಿಸಿದ್ದಾರೆ. ಇಂಥ ಉಜ್ವಲ ಹಿನ್ನೆಲೆಯ ನಾಡಿನಲ್ಲಿ ಇತ್ತೀಚಿಗೆ ಮುಸ್ಲಿಂ, ಕ್ರೈಸ್ತ ಮತ್ತು ದಲಿತ ಸಮುದಾಯಗಳ ಮೇಲೆ ನಾನಾ ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ. ಸರ್ವರನ್ನೂ ಒಳಗೊಳ್ಳುವ, ಒಪ್ಪಿ ಅಪ್ಪಿಕೊಳ್ಳುವ ಗುಣಲಕ್ಷಣದ ಕರ್ನಾಟಕ ರಾಜ್ಯದ ಬಗ್ಗೆ ಹೆಮ್ಮೆ, ಅಭಿಮಾನ ಹೊಂದಿರುವ ಜನರಲ್ಲಿ ಈ ಘಟನೆಗಳು ಆಘಾತ ಮೂಡಿಸಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಕುಚಿತ ಮತೀಯವಾದಿಗಳು ಹಾಗೂ ದ್ವೇಷಪೂರಿತ ಕೆಲ ವ್ಯಕ್ತಿಗಳು ಮತ್ತು ಗುಂಪುಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ದೂರವಿಡುವ ಹಾಗೂ ಅವರನ್ನು ದಮನಗೊಳಿಸುವ ಕೃತ್ಯಗಳಲ್ಲಿ ತೊಡಗಿರುವುದು ಆತಂಕದ ವಿಷಯವಾಗಿದೆ. ಭಾರತ ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಅಕ್ಷರಶಃ ಎತ್ತಿ ಹಿಡಿಯುತ್ತೇವೆಂದು ಪ್ರಮಾಣವಚನ ಸ್ವೀಕರಿಸಿರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ಈ ವಚನವನ್ನು ಬಹಿರಂಗವಾಗಿ ಉಲ್ಲಂಘಿಸಿ ಅಲ್ಪಸಂಖ್ಯಾತ ಸಮುದಾಯದವರನ್ನು ಭೀತರನ್ನಾಗಿಸುವುದು ಇದಕ್ಕಿಂತಲೂ ಕಳವಳದ ಹಾಗೂ ಹತಾಶೆಯ ಸಂಗತಿಯಾಗಿದೆ. ಇದಲ್ಲದೆ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ಈ ಕೇಡುಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ ಹಿಂಸೆ ದುರಾಕ್ರಮಣ ಕೃತ್ಯಗಳಿಗೆ ಉತ್ತೇಜನ ನೀಡುತ್ತಿರುವುದಂತೂ ಇನ್ನೂ ನೋವಿನ ಸಂಗತಿಯಾಗಿದೆ. ಇನ್ನೂ ಮುಂದುವರಿದು ಈ ಸಮುದಾಯಗಳ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿ ಅವರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಪರಿಗಣಿಸಿ ಅವರ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸದಂತೆ ಹತ್ತಿಕ್ಕುತ್ತಿರುವುದು ಹೀನಾಯ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದ ಅನುಚ್ಚೇದ 51Ale) ಯಲ್ಲಿ “ಭಾರತದ ಎಲ್ಲ ಜನರ ನಡುವೆ ಧಾರ್ಮಿಕ, ಭಾಷೆ, ಪ್ರಾದೇಶಿಕ ಹಾಗೂ ವರ್ಗೀಯ ವೈವಿಧ್ಯತೆಗಳನ್ನು ಮೀರಿ ಪರಸ್ಪರ ಸೌಹಾರ್ದತೆ ಮತ್ತು ಬಂಧುತ್ವವನ್ನು ಉತ್ತೇಜಿಸುವುದು” ಪ್ರತಿಯೊಬ್ಬ ನಾಗರಿಕರ ಮೂಲಭೂತ ಕರ್ತವ್ಯ ಎಂದು ಹೇಳಿದೆ. ಅನುಚ್ಛೇದ 5A(f)ವು “ಸಮ್ಮಿಶ್ರ ಸಂಸ್ಕೃತಿಯನ್ನೊಳಗೊಂಡ ದೇಶದ ಭವ್ಯ ಪರಂಪರೆಗೆ ಪ್ರಾಮುಖ್ಯತೆ ನೀಡಿ ಅದನ್ನು ಉಳಿಸಬೇಕು” ಎಂದು ಪ್ರತಿಯೊಬ್ಬ ನಾಗರಿಕರನ್ನು ಒತ್ತಾಯಿಸುತ್ತದೆ. ಆದರೆ ನಮ್ಮ ಚುನಾಯಿತ ಜನಪ್ರತಿನಿಧಿಗಳು ಇದನ್ನು ಮರೆತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯವು ಅಭಿವೃದ್ಧಿ ಹೊಂದಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಅಂದರೆ ‘ಎಲ್ಲರ ಜೊತೆ, ಎಲ್ಲರ ವಿಶ್ವಾಸದೊಂದಿಗೆ, ಎಲ್ಲರ ಅಭಿವೃದ್ಧಿ”ಯನ್ನು ಸಾಧಿಸಬೇಕಾದರೆ ಶಾಂತಿ, ಸೌಹಾರ್ದತೆ ಮತ್ತು ನ್ಯಾಯದಾನಗಳು ಅತ್ಯಗತ್ಯ ಮೂಲ ಅಂಶಗಳಾಗಿವೆ. ಸರ್ವ ಜನರ ಸುಸ್ಥಿರ ಮತ್ತು ಉತ್ತಮ ಭವಿಷ್ಯದ ನೀಲ ನಕ್ಷೆಯೆಂಬಂತಿರುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ 16 ನೆಯ ಅಂಶವೂ ಸಹ ಇದನ್ನೇ ಹೇಳುತ್ತದೆ. ಏನೆಂದರೆ, “ಜಾಗತಿಕ ಸುಸ್ಥಿರ ಅಭಿವೃದ್ಧಿಯ ಯಾವುದೇ ಉದ್ದೇಶವನ್ನು ಈಡೇರಿಸುವಲ್ಲಿ ಮೊದಲ ಹೆಜ್ಜೆಯೆಂದರೆ, ಸಾಂಸ್ಥಿಕ ನಿರ್ಬಂಧಗಳ ಹೇರಿಕೆಯಿಂದ ನ್ಯಾಯವಂಚಿತರಾಗಿ ಅಥವಾ ನೇರ ದಂಗೆ ಹಿಂಸೆಗಳಿಂದಾಗಿ ತಮ್ಮ ಮೂಲಭೂತ ಸ್ವಾತಂತ್ರ್ಯಕ್ಕೆ ಅಪಾಯವನ್ನು ಎದುರಿಸುತ್ತಿರುವ ವ್ಯಕ್ತಿಗಳ ಜೀವ ರಕ್ಷಣೆ ಹಾಗೂ ಮಾನವ ಹಕ್ಕುಗಳನ್ನು ಸಂರಕ್ಷಿಸುವುದಾಗಿದೆ”.
ಇತ್ತೀಚಿಗೆ ಕೆಲವು ವಿಭಜಕ ಕೃತ್ಯಗಳಿಂದ ನಿರ್ದಿಷ್ಟ ಸಮುದಾಯಗಳನ್ನು ಅನ್ಯಗೊಳಿಸಿ ಆ ಜನರನ್ನು ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸುವ ಪ್ರವೃತ್ತಿ ಕಂಡು ಬರುತ್ತಿದೆ. ಇದು ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸುವುದಷ್ಟೇ ಅಲ್ಲದೆ ನಮ್ಮ ರಾಜ್ಯದ ಕೀರ್ತಿಯನ್ನು ಸಹ ಕುಂದಿಸುವ ಜೊತೆಗೆ ಹೂಡಿಕೆದಾರರು ಮತ್ತು ಹೊಸತನ್ನರಸುವ ಉದ್ಯಮಿಗಳ ನಂಬಿಕೆ ಮತ್ತು ವಿಶ್ವಾಸವನ್ನು ಹುಸಿಗೊಳಿಸುತ್ತದೆ. ನಾಗರಿಕರಲ್ಲಿ ಅಪನಂಬಿಕೆ ಮಾತು ಅಸುರಕ್ಷಿತ ಭಾವನೆ ಮೂಡಿಸಿ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಸಮಾಜದ ಎಲ್ಲ ವರ್ಗಗಳಿಗೂ ಹಾನಿ ಉಂಟು ಮಾಡುವುದಲ್ಲದೆ ನಮ್ಮ ದೇಶದ ಸಮಗ್ರತೆಗೆ ಕೂಡಾ ಧಕ್ಕೆ ತರುತ್ತದೆ. ಇಂಥ “ದಿಗಿಲು ಹುಟ್ಟಿಸುವ ಭಾರತ” ಮತ್ತು “ಕಳಂಕಿತ ಭಾರತ”ದ ವಾತಾವರಣದಲ್ಲಿ ‘ಭಾರತದಲ್ಲಿ ತಯಾರಿಸು” (Make In India) ಎನ್ನುವ ಘೋಷ ವಾಕ್ಯವನ್ನು ಸಾಕಾರಗೊಳಿಸುವುದು ಸಾಧ್ಯವಿಲ್ಲದ ಮಾತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನಡೆದ ‘ಬಸವ ಜಯಂತಿ – 2022’ ಸಂದರ್ಭದಲ್ಲಿ ಬಸವಣ್ಣನವರ ಕನಸಿನ ಸಮಾನತೆಯ ಸೌಹಾರ್ದಯುತ ಸಮಾಜವನ್ನು ಕಟ್ಟುವುದು ನಮ್ಮ ಗುರಿ ಎಂದು ಸರ್ಕಾರದ ಜಾಹಿರಾತಿನಲ್ಲಿ ಪ್ರಕಟಿಸಲಾಗಿದೆ. ಸಾಮಾಜಿಕ ಸೌಹಾರ್ದತೆ, ಬ್ರಾತೃತ್ವ, ಏಕತೆ ಮತ್ತು ಅಂತಃಕರಣಕ್ಕೆ ಬಸವಣ್ಣನವರು ಒತ್ತು ನೀಡಿದ್ದರು ಎನ್ನುವ ನಮ್ಮ ಪ್ರಧಾನ ಮಂತ್ರಿಯವರ ಮಾತುಗಳನ್ನು ಸಹ ಇದರ ಜೊತೆ ಉದ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರವು ಪವಿತ್ರ ರಂಜಾನ್ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಆಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೆ ಅದು ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು. ಶಾಂತಿ ಸೌಹಾರ್ದತೆ ಮತ್ತು ನ್ಯಾಯದಾನ ನೀಡುವ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರವು ನಿರ್ವಹಿಸುತ್ತದೆ ಎನ್ನುವ ನಂಬಿಕೆಯಿಂದ ನಾವು ಮುಖ್ಯಮಂತ್ರಿಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲ ನಾಗರಿಕರ ಸೌಖ್ಯ ಮತ್ತು ವಿಶ್ವಾಸವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮನವಿ ಮಾಡಿ ಕೊಳ್ಳುತ್ತೇವೆ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಐದು ಬೇಡಿಕೆ ಇಟ್ಟ ಸಾಹಿತಿಗಳು:

1. ರಾಜ್ಯ ಪೊಲೀಸ್ ಪಡೆಯು ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿ ಕಾನೂನು ಪಾಲನೆಯನ್ನು ಎತ್ತಿ ಹಿಡಿದು ಸಮಾಜದ ದುರ್ಬಲ ವರ್ಗದ ನಾಗರಿಕರ ರಕ್ಷಣೆ ಮಾಡುವಂತೆ ಸೂಕ್ತ ನಿರ್ದೇಶನ ನೀಡಬೇಕು. ಮತೀಯವಾದಿ ಮತ್ತು ಜಾತಿವಾದಿ ಅಪರಾಧಗಳಿಗೆ ತುತ್ತಾಗುವ ನಾಗರಿಕರಿಗೆ ಪೂರ್ಣ ನ್ಯಾಯ ದೊರಕುವಂತೆಯೂ, ಇಂಥ ಅಪರಾಧಗಳನ್ನು ಎಸಗುವವರ ವಿರುದ್ಧ ಸಾಕ್ಷಿದಾರರು ಧೈರ್ಯದಿಂದ ಮುಂದೆ ಬಂದು ಮುಕ್ತವಾಗಿ ತಮ್ಮ ಸಾಕ್ಷ್ಯವನ್ನು ನೀಡುವಂತೆಯೂ, ಅವರಿಗೆಲ್ಲಾ ಪೂರ್ಣ ರಕ್ಷಣೆ ಒದಗಿಸಿ ಅವರಲ್ಲಿ ವಿಶ್ವಾಸ ತುಂಬಿಸಬೇಕು.

2. ಕೋಮುವಾದೀ ಗಲಭೆಗಳಿಂದಾಗಿ ಹಿಂಸೆ, ಸಾವು ಹಾಗು ಬದುಕು ನಷ್ಟವಾದಾಗ, ಸ್ಥಳೀಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ, ವಿಶೇಷವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೋಲಿಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

3. ನಿರ್ದಿಷ್ಟ ಕೋಮಿನ ಜನರನ್ನು ನಿಂದಿಸಿ ಅಮಾನವೀಕರಣಗೊಳಿಸುವುದರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ದೈಹಿಕ ಹಿಂಸೆಗೆ ಪ್ರಚೋದನೆ ನೀಡುವಂತಹ ಪ್ರವೃತ್ತಿಗೆ ತಡೆಯೊಡ್ಡಿ ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ವ್ಯಕ್ತಿಗಳ ವಿರುದ್ಧ ಪ್ರಬಲ ಕಾನೂನು ಕ್ರಮ ಜರುಗಿಸಬೇಕು.

4. ಸಾಮಾಜಿಕ ಜಾಲತಾಣಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸಹ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಸುಳ್ಳು ಸುದ್ದಿಗಳು ಮತ್ತು ಗಾಳಿ ಸಮಾಚಾರಗಳನ್ನು ಹಬ್ಬಿಸುವ ಕೃತ್ಯ ನಡೆಯುತ್ತಿದೆ. ಇದರಿಂದ ಈ ಸಮುದಾಯಗಳನ್ನು ಆನ್ಯವಾಗಿಸುವ ಮತ್ತು ಅವರನ್ನು ಹಿಂಸೆಗೆ ಒಳಪಡಿಸುವ ಅಪಾಯ ಹೆಚ್ಚಾಗುತ್ತಿದೆ. ಇಂಥ ಅಪರಾಧಗಳ ವಿರುದ್ಧ ಸರ್ಕಾರ ಬಹಿರಂಗವಾಗಿ ದನಿಯೆತ್ತಿ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

5. ನೀತಿಯುತ ಪತ್ರಿಕೋದ್ಯಮದ ತತ್ವಬದ್ಧ ಮೌಲ್ಯಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿಯ ಸುದ್ದಿ ಬಿತ್ತರಿಸುತ್ತಾ ಸಮಾಜದಲ್ಲಿ ಅಸಹಿಷ್ಣುತೆ, ದ್ವೇಷ, ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿರುವ ಮಾಧ್ಯಮಗಳಲ್ಲಿನ ಹಲವರಿಗೆ ಅಂತಹ ಕರ್ತವ್ಯಲೋಪಗಳನ್ನು ನಿಗ್ರಹಿಸುವಂತೆ ಒತ್ತಾಯಯಿಸಬೇಕು. ರಾಜ್ಯದಲ್ಲಿನ ಸೌಹಾರ್ದಯುತ ವಾತಾವರಣವನ್ನು ನಿರ್ಭೀತರಾಗಿ ಹಾಳುಗೆಡವುತ್ತಿರುವುದು ಒಪ್ಪಿತವಲ್ಲವೆಂಬುದನ್ನು ಮನದಟ್ಟು ಮಾಡಬೇಕು.

ರಾಜ್ಯ ಸರ್ಕಾರವು ಈ ಸಕ್ರಿಯ ಕ್ರಮಗಳನ್ನು ಕೈಗೊಂಡರೆ ಹಿಂಸೆಯಲ್ಲಿ ತೊಡಗಿರುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿರುವರಿಗೆ, ಹಾಗೂ ನಾಗರಿಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಮೂಡಿಸುತ್ತಿರುವವರಿಗೆ ಇಂತಹ ಕಾನೂನು ಬಾಹಿರ ಹಾಗೂ ಒಪ್ಪಿತವಲ್ಲದ ವರ್ತನೆಗಳನ್ನು ಹಾಗೂ ದ್ವೇಷಪೂರಿತ ಅಪರಾಧಗಳನ್ನು ಸರ್ಕಾರ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಸಾರಿದಂತಾಗುವುದು. ರಾಜ್ಯವು ಇಂತಹ ಸಂಕ್ರಮಣ ಸ್ಥಿತಿಯಲ್ಲಿರುವಾಗ ಮತೀಯ ಸೌಹಾರ್ದತೆಯನ್ನು ಮರುಪ್ರತಿಷ್ಠಾಪಿಸುವುದು ಪ್ರಾಮುಖ್ಯವಾದ ಮತ್ತು ಅತ್ಯಂತ ತುರ್ತಿನ ಕಾರ್ಯವೆಂದು ನಾವು ಪರಿಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ನೇತೃತ್ವದ ಸರ್ಕಾರವು ಮುನ್ನಡಿ ಇಡಬೇಕೆಂದು ಬಯಸುತ್ತೇವೆ. ಈ ಸಂದರ್ಭದಲ್ಲಿ ರಾಜ್ಯವು ಪ್ರಗತಿಯೆಡೆಗೆ ಸಾಗುವ ಬದಲಾಗಿ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಳಮಟ್ಟಕ್ಕಿಳಿಯಿತು ಎನ್ನುವ ಅಪಖ್ಯಾತಿಗೆ ತಾವು ಒಳಗಾಗಬಾರದು ಎನ್ನುವ ಆಶಯ ನಮ್ಮದು. ಈ ನಿಟ್ಟಿನಲ್ಲಿ ಸರ್ಕಾರದ ಪ್ರಬಲ, ಸ್ಪಷ್ಟ, ಅಧಿಕೃತ ಆದೇಶ ಕ್ರಮಗಳನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆ ಎಂದು 75 ಸಾಹಿತಿಗಳು ಸಹಿಯೊಂದಿಗೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!