ಸುದ್ದಿಒನ್, ಹಿರಿಯೂರು, ಜೂನ್. 02 : ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಬೇಕು ಎಂದು ನಗರ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ ತಿಳಿಸಿದರು.
ನಗರದ ಅಜಾದ್ ನಗರದಲ್ಲಿನ ಸೈಯದ್ ಹುಮಾರ್ ಮಸೀದಿ ಪಕ್ಕದಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಶಾಂತಿ ಸಭೆ ನಡೆಸಿ ಮಾತನಾಡಿದರು.
ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಹಾಗೂ ಧರ್ಮದ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಿದಾಗ ಮಾತ್ರ ನಾವು ಶಾಂತಿ ಕಾಪಾಡಬಹುದು. ಬಕ್ರೀದ್ ಹಬ್ಬ ಆಚರಣೆ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾವೆಲ್ಲರೂ ಸಹಕರಿಸಬೇಕು. ಬಕ್ರೀದ್ ಆಚರಣೆಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಿರೀಶ್, ವಿಠ್ಠಲ್ ಪಾಂಡುರಂಗ, ಜಗದೀಶ್, ಮುನಿರ್ ಮುಲ್ಲಾ, ಅಭಿಬ್ ಉಲ್ಲಾ, ನಗರ ಠಾಣೆ ಪಿಎಸ್ಐ ಶಶಿಕಲಾ, ಎಎಸ್ಐ ರಾಘವ ರೆಡ್ಡಿ, ಸಿಬ್ಬಂದಿಗಳಾದ ರಾಘು, ಸುನಿಲ್, ಜಾಫರ್ ಸಾಧಿಕ್, ಸುದರ್ಶನ್ ಗೌಡ ಸೇರಿದಂತೆ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.






