ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.24) : ಮಲ್ಲಾಪುರ ಕೆರೆ ಹಾಳು ಮಾಡಲು ಬಿಡಲ್ಲ. ಅಲ್ಲಿ ಕ್ಯಾಸಿನೋ ಬೇಡ ಎಂದು ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘುಆಚಾರ್ ತಮ್ಮ ವಿರೋಧ ವ್ಯಕ್ತಪಡಿಸಿದರು.
ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೋಳಗುಡ್ಡ ಹತ್ತನೆ ವಾರ್ಡ್‍ನಲ್ಲಿರುವ ಜೆಡಿಎಸ್ ಮುಖಂಡ ಸಾಧಿಕ್‍ವುಲ್ಲಾ ಮನೆಗೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ ಗುಡ್‍ಲಕ್ ಇಮ್ತಿಯಾಜ್ ಪುತ್ರ ಇರ್ಫಾನ್ ಮತ್ತು ಸಂಗಡಿಗರು ಗುಂಪುಕಟ್ಟಿಕೊಂಡು ಬಂದು ಅಡ್ಡಗಟ್ಟಿ ಪಪ್ಪಿ ಪಪ್ಪಿ ಎಂದು ಕೂಗುತ್ತ ನನ್ನ ಮೇಲೆ ಹಲ್ಲೆಗೆ ಮುಂದಾಗಿ ಮತಯಾಚನೆಗೆ ಬರದಂತೆ ಬೆದರಿಕೆ ಹಾಕಿದರು. ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಂಡು ಈ ಗಲಾಟೆಯ ಹಿಂದೆ ಇರುವವರನ್ನು ಪತ್ತೆ ಹಚ್ಚುವಂತೆ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದರು.
ಮಂಗಳವಾರದಿಂದ ಅದೇ ಜಾಗದಿಂದ ಚುನಾವಣಾ ಪ್ರಚಾರ ಆರಂಭಿಸುತ್ತೇನೆ. ಧಮ್ಮಿದ್ದರೆ ಯಾರು ಬರುತ್ತಾರೋ ಬರಲಿ ನಾನು ಒಂದು ಕೈ ನೋಡುತ್ತೇನೆ. ಮುಸ್ಲಿಂ ಮಕ್ಕಳು ಶಿಕ್ಷಣಕ್ಕೆ ಒತ್ತು ಕೊಡಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿದೆ ಅಷ್ಟೆ. ಯಾರ ಬಳಿಯೂ ಮತ ಯಾಚಿಸಲಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ಮತ ಕೇಳುವ ಹಕ್ಕಿದೆ. ನನ್ನನ್ನು ತೇಜೋವಧೆ ಮಾಡುವವರಿಗೆ ನಾನು ಸರಿಯಾಗಿ ಉತ್ತರಿಸುತ್ತೇನೆ. ನನ್ನದು ರೈತರ ಪಕ್ಷ. ಸ್ವಾಭಿಮಾನವಿದೆ. ಈ ಬಾರಿಯ ಚುನಾವಣೆಯಲ್ಲಿ 35 ರಿಂದ 38 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆಂದು ಹೇಳಿದರು.
ಜಿ.ಹೆಚ್.ತಿಪ್ಪಾರೆಡ್ಡಿರವರು ಒಂದು ದಿನವೂ ನನ್ನ ಪ್ರಚಾರಕ್ಕೆ ಅಡ್ಡಿಪಡಿಸಲಿಲ್ಲ. ಅವರೊಬ್ಬ ಪ್ರಬುದ್ದ ರಾಜಕಾರಣಿ. ಕಾಂಗ್ರೆಸ್ ಪಕ್ಷ ತರಿಕೆರೆಯಲ್ಲಿ ಗೋಪಿಕೃಷ್ಣಗೆ ಟಿಕೇಟ್ ತಪ್ಪಿಸಿತು. ಅದರಂತೆ ನನಗೂ ವಂಚಿಸಿದೆ. ಕಾಂಗ್ರೆಸ್‍ನಲ್ಲಿದ್ದಾಗಲು ಅಹಿಂದ ಪರವಾಗಿದ್ದೆ. ಈಗಲು ಅಹಿಂದ ಪರನೆ. ಜಾತಿ ದೊಡ್ಡದಲ್ಲ. ಹೇಗೆ ಬದುಕುತ್ತೇವೆಂಬುದು ಮುಖ್ಯ. ನಾನು ಸಂಸ್ಕೃತಿ ಕಲಿತಿದ್ದೆ ಲಿಂಗಾಯಿತರಿಂದ. ದೌರ್ಜನ್ಯ ಮಾಡುವುದಾದರೆ ಗೋವಾದಲ್ಲಿ ಹೋಗಿ ಮಾಡಲಿ. ನಾನು ಇಲ್ಲಿಯವನೆ. ಹಾಗಾಗಿ ಬೇರೆಯವರ ಆಟ ನಡೆಯಲು ಬಿಡುವುದಿಲ್ಲ. ಯಾರಿಗೂ ಹೆದರುವವನಲ್ಲ. ರಾಜಕಾರಣದಲ್ಲಿ ಟೀಕೆ, ನಿಂದನೆಗಳು ಆರೋಗ್ಯಕರವಾಗಿರಬೇಕೆಂದು ಹೆಸರು ಹೇಳದೆ ತಮ್ಮ ಎದುರಾಳಿಯ ವಿರುದ್ದ ಹರಿಹಾಯ್ದರು.
ಮುಸ್ಲಿಂ ಧರ್ಮಗುರು ಸುಬೇರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.