ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ : ಡೆತ್ ನೋಟ್ ಪತ್ತೆ, ತೀವ್ರಗೊಂಡ ತನಿಖೆ…!

2 Min Read

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.29 : ನಗರದ ಜೈಲ್ ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಐದು ಜನರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಇಂದು ಬೆಳಿಗ್ಗೆ ವಿಧಿ ವಿಜ್ಞಾನ ತಂತ್ರಜ್ಞರು ಭೇಟಿ ನೀಡಿ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಇತ್ತ ಪೊಲೀಸರ ತನಿಖೆ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು ಪ್ರಕರಣ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಮೃತ ಜಗನ್ನಾಥ ರೆಡ್ಡಿಯ ಪುತ್ರ ನರೇಂದ್ರರೆಡ್ಡಿ 2013 ರಲ್ಲಿ ದರೋಡೆ ಪ್ರಕರಣವೊಂದರಲ್ಲಿ  ಭಾಗಿಯಾಗಿದ್ದರಂತೆ,  ಆರೋಪಿಯ ವಿರುದ್ಧ ಬೆಂಗಳೂರಿನ ಹೊರವಲಯದ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ದರೋಡೆ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮನನೊಂದ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮ ಮತ್ತು ಪುತ್ರಿ ತ್ರಿವೇಣಿ

 

ಜಗನ್ನಾಥ ರೆಡ್ಡಿಯ ಪುತ್ರರಾದ ನರೇಂದ್ರ ರೆಡ್ಡಿ ಮತ್ತು ಕೃಷ್ಣಾ ರೆಡ್ಡಿ

ಈ ನಡುವೆ ಅವರ ಸೋದರ ಸಂಬಂಧಿ ತಿಮ್ಮಾರೆಡ್ಡಿ ಈ ಪ್ರಕರಣದ ಐವರಿಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಿದ್ದಾರೆ.

ನಾವಿಬ್ಬರು ಜೊತೆಗೆ ಬೆಳೆದವರು, ಓದಿದವರು, ಜಗನ್ನಾಥ ರೆಡ್ಡಿ ಚೆನ್ನಾಗಿ ಓದಿ ಇಂಜಿನಿಯರ್ ಆದರು. ಇತ್ತೀಚಿನ ಐದು ವರ್ಷಗಳಲ್ಲಿ ನಾನು ಅವರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಯಾವಾಗಲಾದರೂ ಸಿಕ್ಕಾಗ ಮಾತನಾಡಿಸುತ್ತಿದ್ದೆ. ಅವರು ಫೋನ್ ನಂಬರ್ ಕೂಡಾ ಕೊಟ್ಟಿಲ್ಲ, ಮಾತನಾಡಿಲ್ಲ. ಇಬ್ಬರು ಗಂಡು ಮಕ್ಕಳು, ಒರ್ವ ಪುತ್ರಿ ಇದ್ದರು. ಒರ್ವ ಪುತ್ರ ಇಂಜಿನಿಯರ್ ಆಗಿದ್ದ.  ಮತ್ತೊಬ್ಬ ಪುತ್ರ ವ್ಯವಸಾಯ ಮಾಡುತ್ತಿದ್ದ. ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ. ಊರಲ್ಲಿ ಜಮೀನು ಕೂಡಾ ಇತ್ತು. ಇಲ್ಲೇ ಪಕ್ಕದ ದೊಡ್ಡ ಸಿದ್ದವ್ವನಹಳ್ಳಿ ಅವರದ್ದು, ಊರ ಪಕ್ಕದಲ್ಲೇ ಜಮೀನು ಕೂಡ ಇದೆ ಎಂದರು.

ಈ ಘಟನೆ ಬಗ್ಗೆ ರಾತ್ರಿ ಈ ವಿಷಯ ಗೊತ್ತಾಯ್ತು, ಏನೂ ಆಗಿದ್ಯೋ ಗೊತ್ತಿಲ್ಲ. ಎಲ್ಲರ ಜೊತೆಗೂ ಚೆನ್ನಾಗಿ ಇರುತ್ತಿದ್ದರು.
ಒಮ್ಮೆ ಮನೆಯಲ್ಲಿ ವಾಸನೆ ಬರುತ್ತದೆ ಎಂದಿದ್ದರು. ಆ ಸಂಧರ್ಭದಲ್ಲಿ ಯಾರೂ ಕೂಡಾ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದರು. ಇಷ್ಟು ದಿನಗಳ ನಂತರ ಈಗ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಕೇಳಿ ತುಂಬಾ ಬೇಸರವಾಯಿತು

ಇನ್ನು ಘಟನಾ ಸ್ಥಳಕ್ಕೆ ದಾವಣಗೆರೆ ಐಜಿಪಿ ತ್ಯಾಗರಾಜನ್, ಎಸ್.ಪಿ. ಧರ್ಮೇಂದ್ರ ಕುಮಾರ್ ಮೀನಾ ಸೇರಿದಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಮನೆಯಲ್ಲಿ ತುಂಬಾ ವಾಸನೆ ಬರುತ್ತಿದೆ. ವೈದ್ಯರು, ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸದ್ಯ ಮನೆಯಲ್ಲಿ ಐವರ ಅಸ್ಥಿಪಂಜರಗಳು ಸಿಕ್ಕಿವೆ. ಪ್ರಕರಣದ ತನಿಖೆ ಬಳಿಕ ಖಚಿತ ಮಾಹಿತಿ ಸಿಗಲಿದೆ ಎಂದು ತಿಳಿಸಿದರು. ಮನೆಯಲ್ಲಿ ಅಸ್ಥಿಪಂಜರ ಸಿಕ್ಕಿರುವುದು ಎಲ್ಲರಿಗೂ ಶಾಕ್ ಆಗಿದೆ. ಅಸ್ಥಿಪಂಜರ ಆಗುವ ತನಕ ಯಾರಿಗೂ ಯಾಕೆ ಅವರ ಬಗ್ಗೆ ಮಾಹಿತಿ ತಿಳಿದಿಲ್ಲ ಎಂಬ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯ ಜಿಲ್ಲೆಯಲ್ಲಿ ಎಲ್ಲರ ಬಾಯಲ್ಲೂ ಇದೇ ಸುದ್ದಿ ಹರಿದಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *