ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 23 : ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಕಂಡಕ್ಟರ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಮರಾಠಿ ಪುಂಡರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಇಲ್ಲಿನ ಸರ್ಕಾರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಬೆಳಗಾವಿ ರಸ್ತೆ ಸಾರಿಗೆ ನಿಗಮದ ಬಸ್ ಕಂಡಕ್ಟರ್ ಮಹದೇವನ ಮೇಲೆ ಹಾಕಿರುವ ಪೋಕ್ಸೊ ಕೇಸನ್ನು ಕೂಡಲೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಬಸ್ ಕಂಡಕ್ಟರ್ ಮರಾಠಿಯಲ್ಲಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕಾಗಿ ಮರಾಠಿಗರು ನಡೆಸಿರುವ ಹಲ್ಲೆಯಿಂದ ಬೆಳಗಾವಿ ಪೊಲೀಸರಿಗೂ ಗಾಯಗಳಾಗಿವೆ. ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರ ಕೆಲವು ಸಮುದಾಯದವರನ್ನು ಓಲೈಸುವ ಬುದ್ದಿವಂತಿಕೆ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಗೃಹ ಸಚಿವರು ಪೊಲೀಸರ ಮೂಲಕ ಕನ್ನಡಿಗರ ಮೇಲೆ ಮನಬಂದಂತೆ ಕೇಸು ಹಾಕಿಸುತ್ತಿರುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು?
ಬಸ್ ಕಂಡಕ್ಟರ್ ಮಹದೇವನ ಮೇಲೆ ಹಾಕಿರುವ ಪೋಕ್ಸೋ ಕೇಸನ್ನು ರದ್ದುಪಡಿಸಿ ಹಲ್ಲೆ ನಡೆಸಿರುವ ಮರಾಠಿಗರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗವುದೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಿಸಾರ್ ಅಹಮದ್, ಅಖಿಲೇಶ್, ಅವಿನಾಶ್, ಮುಜಾಹಿದ್, ಯರ್ರಿಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

