ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಘೋಷಣೆಯಾದ ನಂತರ ರಾಜ್ಯ ರಾಜಕಾರಣದಲ್ಲಿ ಕೈ ಕಮಲ ಭರಾಟೆ ಜೋರಾಗಿಯೇ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಲವು ಕಾರಣಕ್ಕೆ ಆರೋಪ-ಪ್ರತ್ಯಾರೋಪಗಳು ರಾಜಕಾರಣದಲ್ಲಿ ಸಾಕಷ್ಟು ಪ್ರಶ್ನೆಯನ್ನ ಹುಟ್ಟಿ ಹಾಕಿದೆ. ಮಂಗಳೂರಿನಲ್ಲಿ ಈಚೆಗೆ ನಡೆದ ನೈತಿಕ ಪೊಲೀಸ್ಗಿರಿ ಪ್ರಕರಣ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ನೀಡಿದ ತ್ರಿಶೂಲ ದೀಕ್ಷೆಯ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಸಲೀ ಹಾಗೂ ಉಗ್ರಪ್ಪ ನಡುವಣ ಮಾತುಕತೆಯಲ್ಲಿ ಕೇಳಿ ಬಂದದ್ದ ಭ್ರಷ್ಟಾಚಾರ ಆರೋಪವನ್ನು ಪ್ರಸ್ತಾಪಿಸಿ ಬಿಜೆಪಿ ತಿರುಗೇಟು ನೀಡಿದೆ.
ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ ಪೊಲೀಸ್‌ಗಿರಿಯ ದೌರ್ಜನ್ಯ, ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ, ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ. ಇದಕ್ಕೆಲ್ಲ ಮುಖ್ಯಮಂತ್ರಿಯ ಬಹಿರಂಗ ಬೆಂಬಲ. ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಟ್ವೀಟ್ಗೆ ತಿರುಗೇಟು ನೀಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಡಿ.ಕೆ.ಶಿವಕುಮಾರ್ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ಸಿಗರ ಭ್ರಷ್ಟಾಚಾರ ಎಲ್ಲಿಯವರೆಗೆ ತಲುಪಿತ್ತು ಎಂದರೆ ಸ್ವತಃ ಪಕ್ಷದ ಆಸ್ತಿಯನ್ನೇ ನಕಲಿ ಗಾಂಧಿ ಕುಟುಂಬ ಕಬಳಿಸಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ತಿಹಾರ್ ಯಾತ್ರೆ ಲಕ್ಷಣಗಳಿವೆ. ಜಾಮೀನಿನ ಮೂಲಕ ಜೈಲು ವಾಸ ತಪ್ಪಿಸಿಕೊಂಡಿದೆ ಅಷ್ಟೇ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಕುಟುಂಬದ ಹೆಸರಿನಲ್ಲಿ ದೇಶವನ್ನು ಕೊಳ್ಳೆ ಹೊಡೆದ ನಕಲಿ ಗಾಂಧಿ ಕುಟುಂಬದ ಆಸ್ತಿ ಎಷ್ಟೆಂದು ಯಾರಿಗಾದರೂ ಗೊತ್ತೇ? ಅದರಲ್ಲಿ ಬೇನಾಮಿ ಎಷ್ಟೆಂದು ಲೆಕ್ಕ ಹಾಕಿ ಹೇಳಲು ಸಾಧ್ಯವೇ? ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪಾಲೆಷ್ಟು ಎಂದು ಬಿಜೆಪಿ ಪ್ರಶ್ನಿಸಿದೆ.
ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕವನ್ನು ಲೂಟಿ ಮಾಡಿದ ಭ್ರಷ್ಟ ಕಾಂಗ್ರೆಸ್ಸಿಗನ ಸಂಕ್ಷಿಪ್ತ ಹೆಸರು ಎಂಎಂಕೆ. ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತಿನ ಲೆಕ್ಕವನ್ನು ಜನರ ಮುಂದಿಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ? ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ. ಭ್ರಷ್ಟಾಚಾರದಲ್ಲಿ ವಿಶೇಷ ಸಾಧನೆ ಮಾಡಿ ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ಪಕ್ಷದ ವಿಶೇಷ ಸಾಧಕರಿವರು ಎಂದು ಬಿಜೆಪಿ ಹೇಳಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್… ಎಷ್ಟೊಂದು ಭ್ರಷ್ಟರು. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ತವರುಮನೆಯಂತಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.