ಬಿಡದಿ: ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಟ್ಟಾಗಿವೆ. ಇದರ ನಡುವೆ ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ನೇಮಕವಾಗಿದ್ದಾರೆ. ಪಕ್ಷ ಸಂಘಟನೆಗೆ ಯಡಿಯೂರಪ್ಪ ಅವರಂತೆಯೇ ವಿಜಯೇಂದ್ರ ಅವರು ಟೊಂಕಕಟ್ಟಿ ಓಡಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ಆಹ್ವಾನದ ಮೇರೆಗೆ ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ವಿಜಯೇಂದ್ರ ಅವರನ್ನು ಕುಮಾರಸ್ವಾಮಿ ಅವರು ಹೂಗುಚ್ಛ ನೀಡಿ, ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಬಳಿಕ ಉಭಯ ಕುಶಲೋಪರಿ ನಡೆದು, ರಾಜಕೀಯ ಚರ್ಚೆಯೂ ನಡೆದಿದೆ.
ಸಭೆಯ ಬಳಿಕ ಮಾತನಾಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು ಪಕ್ಷದ ಜವಬ್ದಾರಿ ತೆಗೆದುಕೊಂಡ ಬಳಿಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಅದರಂತೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಒಗ್ಗಟ್ಟಾಗಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದೇನೆ. ದೇಶದ ಭವಿಷ್ಯ ರೂಪಿಸುವ ಚುನಾವಣೆಯಲ್ಲಿ, 28 ಕ್ಷೇತ್ರಕ್ಕೆ 28 ಕ್ಷೇತ್ರವನ್ನು ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲುವುದಕ್ಕೆ ಹೊರಟಿದೆ. ಈ ಮೈತ್ರಿಯನ್ನು ಲೋಕಸಭೆಯಲ್ಲಿ ಮಾತ್ರವಲ್ಲದೇ, ರಾಜ್ಯ ಸಭೆಯಲ್ಲೂ ಮುಂದಿವರೆಸುತ್ತೇವೆ. ರೈತ ವಿರೋಧಿ, ಬಡವರ ವಿರೋಧಿ, ದಲಿತ ವಿರೋಧಿ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಕುಮಾರಸ್ವಾಮಿ ಅವರ ಭೇಟಿ ಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.