ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಉಪಚುನಾವಣೆ ಸದ್ದು ಮಾಡುತ್ತಿದೆ. ಈಗ ಖಾಲಿಯಾಗುತ್ತಿರುವ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ರಾಜ್ಯದ ಮೂರು ಕ್ಷೇತ್ರಗಳಲ್ಲಿ ಗೆದ್ದಂತ ಮೂವರು ಈಗ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಅವರಿಂದ ತೆರವಾದ ಕ್ಷೇತ್ರಗಳಿಗೆ ಈಗ ಉಪಚುನಾವಣೆ ನಡೆಯಬೇಕಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚನ್ನಪಟ್ಟಣ ಕ್ಷೇತ್ರ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸ್ಪರ್ಧಿಸಿದ್ದ ಶಿಗ್ಗಾಂವಿ, ಸಚಿವ ಇ.ತುಕರಾಂ ಶಾಸಕರಾಗಿ ಗೆದ್ದಿದ್ದ ಬಳ್ಳಾರಿಯ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ.
ಈಗಾಗಲೇ ಈ ಕ್ಷೇತ್ರಗಳಿಗೆ ಉಪಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಕ್ಕೆ ಸಾಕಷ್ಟು ಜನ ಮುಂದೆ ಬಂದಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಅವರಿಂದ ತೆರವಾಗುತ್ತಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಹಲವರಿಂದ ನಿರೀಕ್ಷೆ ಇದೆ. ಸಿ.ಪಿ.ಯೋಗೀಶ್ವರ್ ಆ ಕಡೆ ದಿಟ್ಟ ನೋಟ ನೆಟ್ಟಿದ್ದರೆ, ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯ ಭವಿಷ್ಯ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಾರೆ ಎಂಬ ಗುಸಗುಸು ಪಿಸುಪಿಸು ಕೇಳಿ ಬರ್ತಾ ಇದೆ. ಅತ್ತ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದ್ದು ಮಾಜಿ ಸಿಎಂ ಬೊಮ್ಮಾಯಿ ಪುತ್ರ ಭರತ್ ಎಂಟ್ರಿ ಕೊಡಬಹುದು ಎಂಬ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಇದೇ ಕ್ಷೇತ್ರದ ಟಿಕೆಟ್ ಮೇಲೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಕೂಡ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಅತ್ತ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಸಂಸತ್ ಪ್ರವೇಶಿಸಿರುವ ಸಚಿವ ಇ.ತುಕಾರಾಂ ಪ್ರತಿನಿಧಿಸಿದ್ದ ಸಂಡೂರು ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಗೆ ನಿಲ್ಲಲು ಒಲ್ಲೆ ಎಂದಿದ್ದ ಇ.ತುಕಾರಾಂ ತಮ್ಮ ಪುತ್ರಿಗೆ ಟಿಕೆಟ್ ಕೇಳಿದ್ದರು. ಟಿಕೆಟ್ ಪಡೆಯುವ ಮುನ್ನ ಷರತ್ತು ಇಟ್ಟಿದ್ದ ಇ.ತುಕಾರಾಂ ಒಂದು ವೇಳೆ ನಾನು ಎಂಪಿ ಎಲೆಕ್ಷನ್ನಲ್ಲಿ ಗೆದ್ದರೆ ತಮ್ಮ ಪುತ್ರಿಗೆ ಸಂಡೂರು ಉಪಚುನಾವಣೆಗೆ ಟಿಕೆಟ್ ನೀಡಬೇಕೆನ್ನುವ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.