ಸುದ್ದಿಒನ್, ಚಿತ್ರದುರ್ಗ. ಜ.08: ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಬಸ್ ಪ್ರಯಾಣ ದರ ಶೇ.15% ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಕ ಬಸ್ ಪ್ರಯಾಣ ದರ ಏರಿಕೆಯನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಹೊರೆ ಹೊರಿಸಿದೆ. ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡೆಸಿರುವ ಸರ್ಕಾರ, ಸಾರಿಗೆ ಪ್ರಯಾಣ ದರವನ್ನು ಶೇ.15% ಹೆಚ್ಚಳ ಮಾಡಿ ಈಗ ಜನಸಾಮಾನ್ಯರ ಮೇಲೆ ಅನಗತ್ಯವಾಗಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ ದಿವಾಳಿಯಾಗಿದ್ದು, ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆಗೆ 2,000 ಕೋಟಿ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ.ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ, ಅದರ ನಷ್ಟವನ್ನು ಸರಿದೂಗಿಸಲು ದರ ಹೆಚ್ಚಿಸಿ ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದು ಕೊಳ್ಳುತ್ತಿದೆ ಎಂದರು.
ರಾಜ್ಯ ಸರ್ಕಾರದ ಈ ತೀರ್ಮಾನ ಜನವಿರೋಧಿ ಮತ್ತು ಬಡವರ ವಿರೋಧಿ ಕ್ರಮವಾಗಿದೆ. ಬಸ್ ದರ ಏರಿಕೆಯನ್ನು ಜನತಾದಳ ಪಕ್ಷವು ಖಂಡಿಸುತ್ತದೆ. ಈ ಕೂಡಲೇ ರಾಜ್ಯ ಸರ್ಕಾರ ಅವೈಜ್ಞಾನಿಕ ಬಸ್ ಪ್ರಯಾಣ ದರ ಏರಿಕೆಯನ್ನು ವಾಪಾಸ್ ಪಡೆಯಬೇಕೆಂದು ಜನತಾದಳ ಪಕ್ಷ ಕಾರ್ಯಕರ್ತರು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ ನಗರಸಭೆ ಸದಸ್ಯ ನಸರುಲ್ಲಾ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಹೂಸದುರ್ಗ ಅಧ್ಯಕ್ಷ ಗಣೇಶ್‍ಮೂರ್ತಿ, ಹಿರಿಯೂರು ಅಧ್ಯಕ್ಷ ಹನುಮಂತರಾಯಪ್ಪ, ಮೊಳಕಾಲ್ಲೂರು ಅಧ್ಯಕ್ಷ ಕರಿಬಸಪ್ಪ, ವಿರಭದ್ರಪ್ಪ, ಲಿಂಗರಾಜು ಮಠದಹಟ್ಟಿ ವೀರಣ್ಣ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಬು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.