ಚಿತ್ರದುರ್ಗ. (ನ.20) : ಜಿಲ್ಲೆಯಲ್ಲಿ ಕಳೆದ ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಕೇಂದ್ರದ ಎ.ಕೆ.ಕಾಲೋನಿಯಲ್ಲಿ ಪಾಳುಬಿದ್ದು ಶಿಥಿಲಾವಸ್ಥೆಯಲ್ಲಿದ್ದ ಶಿಶುವಿಹಾರದ ಗೋಡೆ ಕುಸಿದು ಮಲಗಿದ್ದ ದಂಪತಿಗಳಿಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದ ದುರ್ಘಟನೆ ನಡೆದ ಬೆನ್ನಿಗೆ ಶನಿವಾರ ಮಾಜಿ ಸಚಿವ ಎಚ್.ಆಂಜನೇಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿದರು.
ಮೃತ ದುರ್ದೈವಿಗಳು ಪರಿಶಿಷ್ಟ ಜಾತಿಗೆ ಸೇರಿದ ಕಡುಬಡತನದ ಕುಟಂಬದವರಾಗಿದ್ದು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದರು. ಗುಡಿಸಿಲಿನ ಪಕ್ಕದಲ್ಲಿಯೇ ಪಾಳುಬಿದ್ದು ಶಿಥಿಲಗೊಂಡಿದ್ದ ಶಿಶುವಿಹಾರ ಕಟ್ಟಡವಿದ್ದು, ಸತತ ಮಳೆಯ ಹೊಡೆತಕ್ಕೆ ಸಿಲುಕಿದ ಕಟ್ಟಡ ರಾತ್ರಿ ಮಲಗಿದ್ದವರ ಮೇಲೆ ಶುಕ್ರವಾರ ಬೆಳಗ್ಗೆ ಏಕಾಏಕಿ ಕವುಚಿ ಬಿದ್ದ ಪರಿಣಾಮ ದಂಪತಿಗಳು ಇಹಲೋಕ ತ್ಯಜಿಸಿದ್ದಾರೆ.
ಮೃತ ದುರ್ದೈವಿಗಳು ಕಂಪ್ಲೇಶಪ್ಪ (46) ತಿಪ್ಪಮ್ಮ(40) ಎಂದು ತಿಳಿದು ಬಂದಿದ್ದು, ಈ ದಂಪತಿಗಳು ಅಪೂರ್ವ(21) ಹಾಗೂ ಅರುಣ್(20) ವಯಸ್ಸಿನ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ತಂದೆ ತಾಯಿಗಳನ್ನ ಕಳೆದುಕೊಂಡ ಮಕ್ಕಳ, ಸಂಬಂಧಿಕರ ರೋದನ ಮುಗಿಲು ಮುಟ್ಟಿದ್ದು, ಮೃತರ ಮಕ್ಕಳ ಭವಿಷ್ಯಕ್ಕೆ ಸಾರ್ವಜನಿಕ ನೆರವನ್ನು ನಿರೀಕ್ಷಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಆಂಜನೇಯರು ಮಾತನಾಡಿ, ಇಂತಹ ದುರ್ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿಶುವಿಹಾರ ಶಿಥಿಲ ಕಟ್ಟಡ ಕುಸಿದು ವಿನಾಕಾರಣ ಬಡಕುಟುಂಬದ ದಂಪತಿಗಳು ಸಾವನ್ನಪ್ಪಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಅವರಿಗೆ ಅಗತ್ಯ ಸರ್ಕಾರ ಹಾಗೂ ವೈಯುಕ್ತಿಕ ನೆರವು ಕಲ್ಪಿಸುವ ಭರವಸೆ ನೀಡಲಾಗಿದೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಆರ್.ನರಸಿಂಹರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‍ರೆಡ್ಡಿ, ಪಪಂ ಸದಸ್ಯರಾದ ಜೆ.ಆರ್.ರವಿಕುಮಾರ್, ಮಹಮ್ಮದ್ ಮನ್ಸೂರ್, ಟಿ.ಬಸಣ್ಣ, ಮುಖಂಡರಾದ ಜಿ.ಎಸ್.ಪ್ರಭುಸ್ವಾಮಿ, ಜಿ.ತಿಪ್ಪೇಸ್ವಾಮಿ, ಬಂಗಾರಪ್ಪ, ಬಂಡೆಕಪಿಲೆ ಓಬಣ್ಣ, ಬಿ.ಕಾಟಯ್ಯ, ಏಕಾಂತಪ್ಪ, ನರಸಿಂಹಮೂರ್ತಿ, ಆರ್.ಶ್ರೀಕಾಂತ್, ಬೋರನಾಯಕ, ಮುತ್ತಯ್ಯ, ಮಹಮ್ಮದ್ ವಾಸೀಂ, ಶಿವಣ್ಣ, ಟಿ.ಶಿವಕುಮಾರ್, ಕೃಷ್ಣಮೂರ್ತಿ, ಜವಳಿ ಮಂಜು ಮತ್ತಿತರರಿದ್ದರು.