ಚಿತ್ರದುರ್ಗ. ನ.14: ಆರೋಗ್ಯಕರ ಜೀವನ ಶೈಲಿ ನಿಮ್ಮದಾಗಿಸಿಕೊಂಡು ಮಧುಮೇಹ ಮುಕ್ತ ಗ್ರಾಮ ನಿರ್ಮಿಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕು ಬ್ಯಾಲಾಳ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಾಗಾರ ಮತ್ತು ವಿಶ್ವ ಮಧುಮೇಹ ದಿನದಲ್ಲಿ ಅವರು ಮಾತನಾಡಿದರು.
ಮಧುಮೇಹವು ದೀರ್ಘಕಾಲದ ಸ್ಥಿತಿಯಾಗಿದ್ದು, ಮೇದೋಜ್ಜೀರಕ ಗ್ರಂಥಿಯಿಂದ ಸಾಕಷ್ಟು ಇನ್ಸುಲಿನ್ ಉತ್ಪಾದನೆಯಾಗುವುದಿಲ್ಲ ಅಥವಾ ಇನ್ಸುಲಿನ್‍ಅನ್ನು ಪರಿಣಾಮಕಾರಿಯಾಗಿ ಬಳಸಲು ದೇಹದ ಅಸಮರ್ಥತೆಯಿಂದ ಉಂಟಾಗುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಅತ್ಯಗತ್ಯ ಎಂದರು.
2023ರಲ್ಲಿ ಪ್ರಕಟವಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ – ಇಂಡಿಯಾ ಡಯಾಬಿಟಿಸ್ ಅಧ್ಯಯನದ ಪ್ರಕಾರ, ಮಧುಮೇಹದ ಹರಡುವಿಕೆಯು ದೇಶದಲ್ಲಿ 10.1 ಕೋಟಿಯಾಗಿದೆ ಎಂದು ತಿಳಿಸಿದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಗ್ರಾಮ ಆರೋಗ್ಯ ನಿಗಾ ತಂಡ ಅಭಿವೃದ್ಧಿಯ ಮಾನದಂಡ ಅರಿತು ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಬೇಕು. ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ. ಇದು ಮಧುಮೇಹದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಗಮನಾರ್ಹ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ಈ ಆಚರಣೆಯು ಮಧುಮೇಹ ತಡೆಗಟ್ಟುವಿಕೆ, ಆರಂಭಿಕ ರೋಗನಿರ್ಣಯ, ಪರಿಣಾಮಕಾರಿ ನಿರ್ವಹಣೆ ಮತ್ತು ಸಮಾನ ಆರೈಕೆಯ ಪ್ರವೇಶದಲ್ಲಿ ಸಮಗ್ರ ಕ್ರಮದ ತುರ್ತು ಅಗತ್ಯವನ್ನು ತೋರಿಸುತ್ತದೆ. ಈ ವರ್ಷದ ಥೀಮ್, ‘ಬ್ರೇಕಿಂಗ್ ಅಡೆತಡೆಗಳು, ಅಂತರವನ್ನು ನಿವಾರಿಸುವುದು,’ ಮಧುಮೇಹ ಆರೈಕೆಯಲ್ಲಿನ ಅಡೆತಡೆಗಳನ್ನು ನಿವಾರಿಸುವ ಸಾಮೂಹಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಮತ್ತು ರೋಗನಿರ್ಣಯ ಮಾಡಿದ ಪ್ರತಿಯೊಬ್ಬ ವ್ಯಕ್ತಿಯು ಉತ್ತಮ-ಗುಣಮಟ್ಟದ, ಕೈಗೆಟುಕುವ ಚಿಕಿತ್ಸೆಗೆ ಪ್ರವೇಶವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ ಎಂದು ತಿಳಿಸಿದದರು.
ಕಾರ್ಯಾಗಾರದಲ್ಲಿ 30 ಜನರ ಮಧುಮೇಹ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ ನಡೆಸಲಾಯಿತು.
ಕಾರ್ಯಕ್ರದಲ್ಲಿ ಬ್ಯಾಲಹಾಳ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಅನುಸೂಯಮ್ಮ ಮಹದೇವಪ್ಪ, ಉಪಾಧ್ಯಕ್ಷೆ ದ್ಯಾಮಕ್ಕ ದೇವೇಂದ್ರಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಸ್ಮ, ಸಮುದಾಯ ಆರೋಗ್ಯ ಅಧಿಕಾರಿ ದಿನೇಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ವಿನುತ, ಸದಸ್ಯರಾದ ಲಕ್ಷ್ಮೀದೇವಿ, ಬೈಯಪ್ಪ, ತಾಲೂಕು ಪಂಚಾಯತ್ ಡಿಟಿಸಿ ಸರಸ್ವತಿ, ಆಶಾ ಬೋಧಕಿ ತಬಿತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಮಪ್ಪ, ಪ್ರವೀಣ್, ರೇಣುಕಾ ಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.