ಸುದ್ದಿಒನ್, ಹಿರಿಯೂರು, ನವೆಂಬರ್. 07 : ತಾಲ್ಲೂಕಿನ ಕುಂದಲಗುರ ಲಂಬಾಣಿ ತಾಂಡಾ ಗ್ರಾಮದ ದೊಡ್ಡಹಳ್ಳದ ಬಳಿ ಚಿಕ್ಕ ಸೇತುವೆ ನಿರ್ಮಾಣ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಾಮಚಂದ್ರ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದ ನೀರು ಬಲನಾಲೆ ಮೂಲಕ ಕುಂದಲಗುರ ತೋಟ್ಟಿ ಸೇರಿದ ನೀರು ಮುಂದೆ ಹಳ್ಳದ ಮೂಲಕ ಸುವರ್ಣಮುಖಿ ನದಿ ಸೇರುತ್ತದೆ. ಆದರೆ ಕುಂದಲಗುರ ಲಂಬಾಣಿ ತಾಂಡಾ ಗ್ರಾಮಕ್ಕೆ ಹಳ್ಳದ ಮೂಲಕವೇ ಹಾದು ಹೋಗಿರುವ ರಸ್ತೆಯಲ್ಲಿ ನೀರು ಹರಿಯುತ್ತಿದೆ. ನೀರು ಹರಿಯುವ ಸ್ಥಳದಲ್ಲಿ ಕಿರು ಸೇತುವೆ ನಿರ್ಮಾಣ ಮಾಡಬೇಕಿದೆ. ನೆಲಮಟ್ಟದ ಸೇತುವೆ ಇದೆ ಆದರೆ ಅದರ ಮೇಲೆ ನೀರು ಹರಿಯುತ್ತಿದೆ. ಈಗಾಗಲೇ ಕಳೆದು ಹದಿನೈದು ದಿನಗಳಿಂದ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಪಾಚಿ ಕಟ್ಟಿದ್ದು, ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಕಾಲು ಜಾರಿ ಬಿದ್ದಿದ್ದು, ನೀರು ಹರಿಯುವ ಸಂದರ್ಭದಲ್ಲಿ ಓಡಾಡಲು ತೊಂದರೆಯಾಗುತ್ತಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸಣ್ಣ ಸೇತುವೆ ನಿರ್ಮಾಣ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಾಮಚಂದ್ರ ಮನವಿ ಮಾಡಿದ್ದಾರೆ.






