ಶಿವಮೊಗ್ಗ: ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಿಎಂ ಯಡಿಯೂರಪ್ಪ ಸಾಕಷ್ಟು ನೆರವಾಗಿದ್ದಾರೆ. ಅಷ್ಟೇ ಅಲ್ಲ ಈ ಜಿಲ್ಲೆಯ ಜನರಿಗೆ ಯಡಿಯೂರಪ್ಪ ಅವರ ಮೇಲೆ ವಿಶೇಷ ಅಭಿಮಾನ. ಹೀಗಾಗಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ಇಡಬೇಕೆಂಬ ಮಾತುಕತೆ ಚರ್ಚೆಯಲ್ಲಿತ್ತು. ಆದರೆ ಇದೀಗ ಆ ರೀತಿ ನಾಮಕರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಬೇಡ ಎಂದಿದ್ದಾರೆ.
ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಈ ನಿಲ್ದಾಣಕ್ಕೆ ನನ್ನ ಹೆಸರಿಡುವುದಾಗಿ ನೀವೂ ಘೋಷಿಸಿದ್ದೀರಿ. ತಮ್ಮ ಈ ವಿಶೇಷ ಪ್ರೀತಿಗೆ ಧನ್ಯವಾದಗಳು. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಎಲ್ಲಾ ಮುಖಂಡರಿಗೂ ನನ್ನ ಧನ್ಯವಾದಗಳು. ಶಿವಮೊಗ್ಗ ಜಿಲ್ಲೆಯ ಜನರ ಬಹುದಿನದ ಕನಸಾದ ವಿಮಾನ ನಿಲ್ದಾಣದ ಸ್ಥಾಪನೆ ನನಸಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಅನುದಾನ ಬಿಡುಗಡೆಗೊಳಿಸುವ ಬಗ್ಗೆಯೂ ಹೇಳಿದ್ದೀರಿ. ಅದಕ್ಕೂ ಧನ್ಯವಾದಗಳು.
ದೇಶದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಮತ್ತು ದೇಶ ಭಕ್ತರಿದ್ದಾರೆ. ಅವರ ಕೊಡುಗೆಗೆ ಹೋಲಿಕೆ ಮಾಡಿದರೆ ನನ್ನದೊಂದು ಅಳಿಲು ಸೇವೆಯಷ್ಟೆ. ನನ್ನನ್ನು ಬೆಂಬಲಿಸಿದ ನನ್ನ ಜನತೆಗೆ ಸೇವೆ ಮಾಡಿದ್ದೇನೆಂಬ ಧನ್ಯತಾಭಾವ ನನ್ನಲ್ಲಿದೆ. ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಬಯಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.