ಮೈಸೂರು: ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನೇ ಅಧಿಕಾರಕ್ಕೆ ತರಬೇಕೆಂಬುದು ಬಿಜೆಪಿ ನಾಯಕರ ಧ್ಯೇಯವಾಗಿದೆ. ಅದಕ್ಕಾಗಿಯೇ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಲೋಕಸಭಾ ಚುನಾವಣೆಗೆ ಸಕಲ ರೀತಿಯ ತಯಾರಿಯೂ ನಡೆದಿದ್ದು, ಡೇಟ್ ಅನೌನ್ಸ್ ಗಾಗಿ ಕಾಯುತ್ತಿದ್ದಾರೆ. ಇದೀಗ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು, ‘ಮತ್ತೊನ್ಮೆ ಮೋದಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಮೈಸೂರಿನಲ್ಲಿ ಮತ್ತೊಮ್ಮೆ ಮೋದಿ 2024 ಗೋಡೆಬರಹ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಚಾಮರಾಜ ಕ್ಷೇತ್ರದ ಪಡುವಾರಹಳ್ಳಿಯಲ್ಲಿ ಮತ್ತೊಮ್ಮೆಮೋದಿ 2024 ಎಂಬ ಗೋಡೆ ಬರಹ ದೀಪಕ್ಕೆ ಬಣ್ಣ ಹಚ್ಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಇದರ ಜೊತೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲೂ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೆಂಗೇರಿ ಹೋಬಳಿಯ ಹೆಚ್ ಗೊಲ್ಲಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್ ಪಕ್ಷಕ್ಕೆ ಮರು ಸೇರ್ಪಡೆಯಾಗಿರುವ ಯಶವಂತಪುರ ಕ್ಷೇತ್ರದ ಬಿಜೆಪಿ ಮುಖಂಡ ಮಾರೇಗೌಡ ಭಾಗಿಯಾಗಿದ್ದರು. ಇದೇ ವೇಳೆ ಯಶವಂತಪುರ ಕ್ಷೇತ್ರದ ಎಸ್ ಟಿ ಸೋಮಶೇಖರ್ ಗೈರಾಗಿದ್ದರು.
ಇನ್ನು ರಾಜ್ಯದಲ್ಲಿ ಬಿಜೆಪಿ ಗೆಲುವಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ನೊಂದವರನ್ನು, ಬೇಸರ ಮಾಡಿಕೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ 2024ಕ್ಕೆ ಮತ್ತೊಮ್ಮೆ ಮೋದಿಯನ್ನು ಕರೆತರುವ ಪ್ಲ್ಯಾನ್ ರೂಪಿಸಿದ್ದಾರೆ.