ಬೆಂಗಳೂರು: 2006-07ರ ಅವಧಿಯಲ್ಲಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಕಾನೂನಿಗೆ ವಿರುದ್ಧವಾಗಿ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮದಲ್ಲಿ ಎ.ಮಟು ಎಕರೆ ಹತ್ತು ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಸಂಬಂಧ ಕೇಸ್ ಕೂಡ ದಾಖಲಾಗಿತ್ತು. ಇದೀಗ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಈ ಪ್ರಕರಣದಿಂದ ಮುಕ್ತಿ ಸಿಕ್ಕಿದೆ.
ಕರ್ನಾಟಕ ಹೈಕೋರ್ಟ್ ಈ ಕೇಸನ್ನು ರದ್ದು ಮಾಡಿದೆ. ಸಿಎಜಿ ವರದಿ ಆಧರಿಸಿ 15 ಪ್ರಕರಣಗಳನ್ನು ಹೈಕೋರ್ಟ್ ರದ್ದು ಮಾಡಿತ್ತು. ಸಿಎಜಿ ವರದಿಯ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಿಎಂ ಮಾಡಿದ ಮನವಿಯ ಮೇರೆಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ.
2015ರಲ್ಲಿ ನ್ಯಾಯಾಲಯದ ಸಮನ್ವಯ ಪೀಠವೂ ಈಗಾಗಲೇ ಆರೋಪಗಳನ್ನು ಪರಿಹರಿಸಿದೆ ಎಂದು ಯಡಿಯೂರಪ್ಪ ಪರ ವಕೀಲ ಸಂದೀಪ್ ಎಸ್ ಪಾಟೀಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಪರ ಬಕೀಲರಾದ ಬಿಎಸ್ ಪ್ರಸಾದ್ ಮತ್ತು ಕೆಪಿ ಯಶೋಧ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಚ್ ಶಾಂತಿ ಭೂಷಣ್ ಸಿಎಜಿ ಪರವಾಗಿ ವಾದ ಮಂಡಿಸಿದ್ದಾರೆ.