ಚಿಕ್ಕಮಗಳೂರು: ಕೇಂದ್ರ ಸಚಿವೆಯಾಗಿರುವ ಶೋಭ ಕರಂದ್ಲಾಜೆ ಸ್ಪರ್ಧೆಗೆ ಚಿಕ್ಕಮಗಳೂರಿನ ಕೆಲ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗೋ ಬ್ಯಾಕ್ ಶೋಭ ಕರಂದ್ಲಾಜೆ ಅಭಿಯಾನವನ್ನು ಶುರು ಮಾಡಿದ್ದಾರೆ. ಅದರ ಜೊತೆಗೆ ಹೈಕಮಾಂಡ್ ನಾಯಕರಿಗೂ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯ ನಡುವೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಕಾರ್ಯಕರ್ತರಿಗೆ ಈ ಬಾರಿಯೂ ಶೋಭಾ ಕರಂದ್ಲಾಜೆಗೆ ಟಿಕೆಟ್ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಸಭೆ ನಡೆಸಿ ಮಾತನಾಡಿದ ಯಡಿಯೂರಪ್ಪ, ಇಮಥ ಅಭಿಯಾನಕ್ಕೆಲ್ಲ ಹೆದರಬೇಕಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇನ್ನು ಮೂರು ದಿನದಲ್ಲಿ ಎಲ್ಲವೂ ಗೊತ್ತಾಗಲಿದೆ. ಶೋಭಾ ಕರಂದ್ಲಾಜೆ ಮೋದಿ ಸಂಪುಟದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯೂ ಶೋಭಾ ಕರಂದ್ಲಾಜೆ ಗೆಲ್ಲುತ್ತಾರೆ. ಈ ರೀತಿಯ ಅಭಿಯಾನವೆಲ್ಲಾ ಷಡ್ಯಂತ್ರದ ಒಂದು ಭಾಗವಷ್ಟೇ ಎಂದಿದ್ದಾರೆ.
ಈ ಮೂಲಕ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪಕ್ಷದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಶಾಸಕ ಸಿಟಿ ರವಿ ಬಣಗಳ ನಡುವಣ ಸಂಘರ್ಷ ತಾರಕಕ್ಕೇರಿದೆ. ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಮುಂದುವರಿದ ಭಾಗವಾಗಿ ಇದೀಗ ‘ಹಠಾವೋ ಅಭಿಯಾನ’ ಆರಂಭಗೊಂಡಿದೆ. ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಾ ಅಭಿಯಾನದ ಜೊತೆ ಬಿಜೆಪಿ ಬಚಾವೋ ಅಭಿಯಾನ ಆರಂಭವಾಗಿದೆ.