ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.26) : ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಮನೆ ಬಾಗಿಲಿಗೆ ಹೋಗಿ ಮತ ಕೇಳುವ ಅಧಿಕಾರವಿದೆ ಯಾವುದೇ ಕಾರಣಕ್ಕೂ ಮುಜುಗರಪಟ್ಟುಕೊಳ್ಳುವುದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಾಟೀಲ್ ಕರೆ ನೀಡಿದರು.
ಚಳ್ಳಕೆರೆ ಟೋಲ್‍ಗೇಟ್‍ನಲ್ಲಿರುವ ಎಸ್.ಎಸ್.ಕೆ.ಎಸ್. ಸಮುದಾಯ ಭವನದಲ್ಲಿ ಬುಧವಾರ ನಡೆದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಸಂಘಟನೆಗಳ ಸಮುದಾಯದ ಮುಖಂಡರ ಸಭೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಎರಡನೆ ಬಾರಿಗೆ ಕೇಂದ್ರ ಮಂತ್ರಿಯಾಗಿರುವುದು ನನ್ನ ಭಾಗ್ಯ. ಸ್ವಚ್ಚ ಭಾರತ್ ಯೋಜನೆಯಡಿ ಶೌಚಾಲಯಗಳ ನಿರ್ಮಾಣ, ಪ್ರಧಾನ ಮಂತ್ರಿ ಆವಾಜ್ ಯೋಜನೆ, ಕಿಸಾನ್ ಸಮ್ಮಾನ್, ಜನಧನ್ ಖಾತೆ ಇವೆಲ್ಲಾ ಕೇಂದ್ರದ ಯೋಜನೆಗಳು. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಪ್ರಧಾನಿ ಬಿಡುಗಡೆಗೊಳಿಸಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಐವತ್ತು ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರನ್ನು ಕೇವಲ ಓಟ್ ಬ್ಯಾಂಕನ್ನಾಗಿ ಮಾಡಿಕೊಂಡಿರುವುದನ್ನು ಬಿಟ್ಟರೆ ಅವರ ಅಭಿವೃದ್ದಿಗೆ ಗಮನ ಕೊಟ್ಟಿಲ್ಲ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಓಡಿಸಿ ಬಿಜೆಪಿ.ಯನ್ನು ಅಧಿಕಾರಕ್ಕೆ ತರುವಂತೆ ಎಸ್ಸಿ, ಎಸ್ಟಿ.ಗಳಲ್ಲಿ ಮನವಿ ಮಾಡಿದರು.
ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಲಿಮೆಂಟ್ ಚುನಾವಣೆಗೆ ನಿಂತಾಗ ಅವರ ವಿರುದ್ದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೋಲಿಸಿದ ಕೀರ್ತಿ ಕಾಂಗ್ರೆಸ್‍ಗೆ ಸೇರಬೇಕು. ಹೀಗಿದ್ದಾಗ ಎಸ್ಸಿ. ಎಸ್ಟಿ.ಗಳು ಏಕೆ ಕಾಂಗ್ರೆಸ್‍ಗೆ ಮತ ಹಾಕುತ್ತೀರ ಎಂದು ಪ್ರಶ್ನಿಸಿದರು?
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಸುಮಾರು ನಲವತ್ತು ವರ್ಷಗಳಿಂದಲೂ ಸದಾಶಿವ ಆಯೋಗದ ವರದಿ ಜಾರಿಗಾಗಿ ಹೋರಾಟ ನಡೆಯುತ್ತಿದ್ದರೂ ಕಾಂಗ್ರೆಸ್ ಯಾವ ದಿಟ್ಟ ನಿರ್ಧಾರವನ್ನು ಕೈಗೊಳ್ಳಲಿಲ್ಲ.
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಎಲ್ಲಾ ಜಾತಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ವೀರಶೈವ ಸಮಾಜವನ್ನು ಒಡೆಯಲು ಹೊರಟು ವಿಫಲವಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ರಾಜ್ಯ ಸರ್ಕಾರ 75 ಯೂನಿಟ್ ಉಚಿತ ಕರೆಂಟ್ ನೀಡುತ್ತಿದೆ. ರೈತರು, ಕೂಲಿ ಕಾರ್ಮಿಕರು, ನೇಕಾರರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರ ಮಕ್ಕಳ ಶಿಕ್ಷಣಕ್ಕೆ ನೆರವು ಘೋಷಿಸಿದೆ. ನುಡಿದಂತೆ ನಡೆಯುವುದು ಬಿಜೆಪಿ. ಸಿದ್ದಾಂತ ಎಂದು ಹೇಳಿದರು.
ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಎಸ್ಸಿ. ಎಸ್ಟಿ.ಕಾಲೋನಿಗಳಲ್ಲಿ ಗುಣಮಟ್ಟದ ರಸ್ತೆಯಾಗಿದೆ. ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವುದು ಬಿಜೆಪಿ. ಧ್ಯೇಯ. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಕೊರೋನಾ ಸಂಕಷ್ಠ ಕಾಲದಲ್ಲಿ ದೇಶದ ಪ್ರಧಾನಿ ಮೋದಿ ಎಲ್ಲರಿಗೂ ಉಚಿತ ಲಸಿಕೆ ನೀಡಿ ಬಡವರು ಹಸಿವಿನಿಂದ ನರಳಬಾರದೆಂದು ಉಚಿತ ಅಕ್ಕಿ, ಗೋಧಿ ನೀಡಿದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳಲ್ಲಿ ಬಿಜೆಪಿ. ಗೆಲ್ಲಬೇಕು. ರಾಜ್ಯದಲ್ಲಿ 140 ಸೀಟು ಗೆಲ್ಲುವ ಗುರಿಯಿದ್ದು, ಮತದಾರರು ಪೂರ್ಣ ಬಹುಮತ ನೀಡಿದರೆ ಬಸವರಾಜ್ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆಂದರು.