ಚಿತ್ರದುರ್ಗ. ಮೇ.30: ಬಾಲಕಾರ್ಮಿಕರನ್ನು ಗುರುತಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಮಿಕ ನಿರೀಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜತೆಗೆ ವಸತಿ ಶಾಲೆಗಳಿಗೆ ಪ್ರವೇಶಾತಿ ನೀಡಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾಮಟ್ಟದ ಟಾಸ್ಕ್‍ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಮಿಕ ಅಧಿಕಾರಿಗಳು ತಾಲ್ಲೂಕುವಾರು ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಪಡೆದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸೂಚನೆ ನೀಡಿದರು.
ಮಂಡಕ್ಕಿ ಭಟ್ಟಿ, ಇಟ್ಟಿಗೆ ಭಟ್ಟಿ, ಗ್ಯಾರೇಜ್‍ಗಳಲ್ಲಿ ಬಾಲಕಾರ್ಮಿಕರು ಕಾರ್ಯನಿರ್ವಹಿಸುವ ಸಂಭವ ಹೆಚ್ಚಾಗಿರುವುದರಿಂದ ಕಾರ್ಮಿಕ ನಿರೀಕ್ಷಕರು ನಿಯಮಿತವಾಗಿ ದಾಳಿ ನಡೆಸಿ ತಪಾಸಣೆ ಮಾಡಬೇಕು ಎಂದು ತಿಳಿಸಿದ ಅವರು, ಬಾಲ್ಯಾ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಪದ್ದತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ನಾಸಿರುದ್ದಿನ್ ಮಾತನಾಡಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 764 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಪೋಷಕರ ವಲಸೆ ಕಾರಣದಿಂದಾಗಿ ಮೊಳಕಾಲ್ಮುರು ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮವಹಿಸಲಾಗುತ್ತಿದೆ ಎಂದರು.
ಕಾರ್ಮಿಕ ಅಧಿಕಾರಿ ಜಿ.ಬಿ.ಚಂದ್ರಶೇಖರಯ್ಯ ಮಾತನಾಡಿ, 2024ರ ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದವರೆಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು. ಜಾಥಾ ಕಾರ್ಯಕ್ರಮದಲ್ಲಿ 400 ಕ್ಕೂ ಶಾಲಾ ಮಕ್ಕಳು ಭಾಗವಹಿಸಲಿದ್ದು, ಜಾಗೃತಿ ಫಲಕಗಳು, ಬ್ಯಾನರ್‍ಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಮಿಕರ ನಿರೀಕ್ಷಕರು ಸಹ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಬೇಕು ಎಂದು ಹೇಳಿದರು.
ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಕಾರ್ಯಕ್ರಮಕ್ಕೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಜಿಲ್ಲೆಯ ಮತ್ತು ತಾಲ್ಲೂಕುಗಳ, ಗ್ರಾಮ ಮಟ್ಟದ ಎಲ್ಲಾ ಸರ್ಕಾರಿ ಇಲಾಖೆಗಳು, ಕಚೇರಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳವುದಿಲ್ಲವೆಂಬ “ಪ್ರಮಾಣ ವಚನ” ಸ್ವೀಕರಿಸಬೇಕು ಎಂದು ಹೇಳಿದರು.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪಾನ್-ಇಂಡಿಯಾ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಶನ್ ಕ್ಯಾಂಪೇನ್ ಆಫ್ ಚೈಲ್ಡ್ ಅಂಡ್ ಅಡೋಲ್ಸೆಂಟ್ ರಕ್ಷಣಾ ಕಾರ್ಯಾಚರಣೆ ಪ್ರಯುಕ್ತ 2024ರ ಜೂನ್ 01 ರಿಂದ 30 ರವರೆಗೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಭಾರತಿ ಆರ್ ಬಣಕಾರ್, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ತಹಶೀಲ್ದಾರ್ ಡಾ.ನಾಗವೇಣಿ, ಕಾರ್ಮಿಕ ನಿರೀಕ್ಷಕ ರಾಜಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.