ಶಿವಮೊಗ್ಗ: ಇಂದು ಸಿಗಂಧೂರು ಸೇತುವೆ ಲೋಕಾರ್ಪಣೆಗೊಂಡಿದೆ. ಈ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೇತುವೆ ಬಗ್ಗೆ ಮಾಯನಾಡಿದ್ದಾರೆ.
ಈ ಸುಂದರ ಸೇತುವೆ ಲೋಕಾರ್ಪಣೆಗೊಂಡಿದೆ. ಈ ಸಂತೋಷದ ಹಾಗೂ ಸಾರ್ಥಕ ಸಮಾರಂಭದಲ್ಲಿ ಅತ್ಯಂತ ಸಂತೃಪ್ತಿ ತಂದಿದೆ. ನಾನು ಸಂಸದನಾಗಿದ್ದಾಗ ಅನುಮೋದನೆಗೊಂಡ ಈ ಯೋಜನೆ ಇಂದಿ ಸಾಕಾರಗೊಂಡಿದೆ. ಈ ಸೇತುವೆ ಈ ಭಾಗದ ಜನರ ಕನಸು, ಬಹು ವರ್ಷಗಳ ಬೇಡಿಕೆಯಾಗಿತ್ತು. ಅದು ಇಂದು ನನಸಾಗಿದೆ. ಶರಾವತಿ ಹಿನ್ನೀರಿನಿಂದಾಗಿ ಸ್ಥಳಾಂತರಗೊಂಡ ಸಂತ್ರಸ್ತರ ನ್ಯಾಯ ಮತ್ತು ಗೌರವಕ್ಕೆ ಈ ಸೇತುವೆ ಸಾಕ್ಷಿಯಾಗಿದೆ.
ನಮ್ಮ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ, ಇಡೀ ದೇಶಕ್ಕೆ ಈ ಸೇತುವೆ ಒಂದು ಪ್ರಗತಿಯ ಐತಿಹಾಸಿಕ ಮೈಲಿಗಲ್ಲಾಗಲಿದೆ. ಇದು ಕೇವಲ ಸೇತುವೆಯಲ್ಲ, ಜನರ ವಿಶ್ವಾಸ, ಜನಪ್ರತಿನಿಧಿಗಳ ಪರಿಶ್ರಮ ಮತ್ತು ಅಭಿವೃದ್ಧಿಯ ಪರಿಕಲ್ಪನೆಯ ಸಾಕಾರವಾಗಿದೆ. ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇವತ್ತು ಇಡೀ ದೇಶ ಒಂದಾಗಿ ವಿಕಸಿತ ಭಾರತದ ಗುರಿಯನ್ನು ನನಸಾಗಲು ಶ್ರಮಿಸುತ್ತಾ ಇದೆ. ಹಾಗೇ ನಮ್ಮ ಕೇಂದ್ರದ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ವಿಶೇಷವಾಗಿ ನಮ್ಮ ಕರ್ನಾಟಕದ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದಾರೆ.
ನಮ್ಮ ಪ್ರಹ್ಲಾದ್ ಜೋಶಿ ಅವರು ಕೂಡ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ನಮ್ಮ ಧ್ಯೇಯ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರ ಸರ್ಕಾರ ಬದ್ಧವಾಗಿ ನಿಂತಿದೆ. ಅದಕ್ಕೆ ಈ ಸೇತುವೆಯೇ ಉದಾಹರಣೆ ಎಂದಿದ್ದಾರೆ.






