ಲಹಾವುಲ್.ಜುಲೈ.24: ಹಿಮಾಚಲ ಪ್ರದೇಶದ ಲಹಾವುಲ್-ಸ್ಪಿತಿ ಜಿಲ್ಲೆಯ ಉದಯಪುರ-ಪಾಂಗಿ ರಸ್ತೆಯ ಕಾಡು ನಾಲಾ ಬಳಿ ಚಲಿಸುತ್ತಿದ್ದ ಟಾಟಾ ಸುಮೊ ಟ್ಯಾಕ್ಸಿಯ ಮೇಲೆ ಬೃಹತ್ ಗಾತ್ರದ ಬಂಡೆಗಳು ಹಾಗೂ ಗುಡ್ಡ ಕುಸಿದು ಬಿದ್ದ ಪರಿಣಾಮ 13 ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಮಾನ್ಯವಾಗಿ ಗುಡ್ಡಕುಸಿತದ ಭೀತಿಯಿಂದ ಬಂದ್ ಆಗಿದ್ದ ಉದಯಪುರ-ಕಿಲ್ಲಾರ್ ರಸ್ತೆಯನ್ನು ಇತ್ತೀಚೆಗಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಬಂದ್ ಆಗಿದ್ದರಿಂದ ತಿಂದಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರು ಪಾಂಗಿ ಕಣಿವೆಯತ್ತ ಪ್ರಯಾಣ ಬೆಳೆಸಲು ಟ್ಯಾಕ್ಸಿ ಏರಿದ್ದರು. ಆದರೆ, ದುರದೃಷ್ಟವಶಾತ್ ವಾಹನವು ಕಾಡು ನಾಲಾ ಸಮೀಪಿಸುತ್ತಿದ್ದಂತೆಯೇ ದಿಢೀರನೆ ಬೆಟ್ಟದ ಭಾಗವೊಂದು ಕುಸಿದು ಬೀಳುವ ಮೂಲಕ ಸಂಪೂರ್ಣ ವಾಹನವನ್ನು ಜಜ್ಜುಗೆೊಳಿಸಿದೆ.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ತಿಂದಿ ಪೊಲೀಸ್ ಠಾಣೆಯ ಸಿಬ್ಬಂದಿ, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿವೆ. ಕಲ್ಲು-ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಜೆಸಿಬಿ ಮತ್ತು ಭಾರೀ ಯಂತ್ರೋಪಕರಣಗಳನ್ನು ಬಳಸಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳೀಯ ಬರ್ಮೌರ್ ಶಾಸಕ ಜನಕ್ ರಾಜ್ ಅವರು ಈ ದುರಂತಕ್ಕೆ ತೀವ್ರ ಕಂಬನಿ ಮಿಡಿದಿದ್ದು, ಚಂಬಾ ಹಾಗೂ ಲಹಾವುಲ್-ಸ್ಪಿತಿ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಪಾಂಗಿ ಕಣಿವೆಯ ನಿವಾಸಿಗಳಾಗಿದ್ದು, ಅವರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಸ್ತುತ ಪ್ರಗತಿಯಲ್ಲಿದೆ.










