ಬಿರ್ಭೂಮ್: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಪ್ರಸಿದ್ಧ ತಾರಾಪೀಠ ದೇವಸ್ಥಾನದ ಸಮೀಪದ ಹೋಟೆಲ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 7 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಮುಂಜಾನೆ ಸುಮಾರು 4.30ರ ವೇಳೆಗೆ ನಾಲ್ಕು ಅಂತಸ್ತಿನ ಹೋಟೆಲ್ನ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಚ್ಚಿನವರು ನಿದ್ರೆಯಲ್ಲಿದ್ದ ಸಮಯದಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಲವರು ಕೊಠಡಿಗಳಲ್ಲೇ ಸಿಲುಕಿಕೊಂಡಿದ್ದರು.
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಬಳಿಕ ಹೋಟೆಲ್ನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದು, ಗಾಯಾಳುಗಳನ್ನು ರಾಮ್ಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.










