Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಅಹಮದಾಬಾದ್ ನ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ಎಂಟು ಸಾವು, ಹಲವರಿಗೆ ಗಂಭೀರ ಗಾಯ.!

---Advertisement---

ದೆಹಲಿ,ಜುಲೈ.18: ಗುಜರಾತ್ ನ ಅಹಮದಾಬಾದ್ ವಸ್ತ್ರಾಲ್ ಪ್ರದೇಶದಲ್ಲಿ ಶನಿವಾರ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮೋಲ್-ಗಟ್ರಾಡ್ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಇದರ ತೀವ್ರತೆ ಎಷ್ಟಿತ್ತೆಂದರೆ ಸುಮಾರು ಐದು ಕಿಲೋಮೀಟರ್ ದೂರದವರೆಗೂ ಸ್ಫೋಟದ ಶಬ್ದ ಕೇಳಿಸಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಘಟನೆಯಿಂದಾಗಿ ಇಡೀ ಪ್ರದೇಶವೇ ನಡುಗಿದ್ದು, ಕಾರ್ಖಾನೆಯ ಕಟ್ಟಡಕ್ಕೆ ವ್ಯಾಪಕ ಹಾನಿಯಾಗಿದೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ನಾಲ್ವರನ್ನು ಎಲ್ಜಿ ಆಸ್ಪತ್ರೆಗೆ ಮತ್ತು ಮೂವರನ್ನು ಅಸರ್ವಾ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಉಳಿದ ಗಾಯಾಳುಗಳ ಸ್ಥಿತಿ ಸದ್ಯಕ್ಕೆ ತಿಳಿದುಬಂದಿಲ್ಲ.

ದುರಂತ ಸಂಭವಿಸಿದ ಪಟಾಕಿ ಕಾರ್ಖಾನೆಯು ವಸ್ತ್ರಾಲ್ನಲ್ಲಿರುವ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಕ್ಯಾಂಪ್ನ ಹಿಂಭಾಗದಲ್ಲೇ ಇತ್ತು. ಸ್ಫೋಟದ ಭೀಕರ ಶಬ್ದ ಕೇಳುತ್ತಿದ್ದಂತೆ ಎಚ್ಚೆತ್ತ ಆರ್ಎಎಫ್ ಸಿಬ್ಬಂದಿ, ಅಗ್ನಿಶಾಮಕ ದಳ ಬರುವ ಮುನ್ನವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವಶೇಷಗಳಡಿ ಸಿಲುಕಿದ್ದ ಜನರನ್ನು ಹೊರತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಘಟನಾ ಸ್ಥಳಕ್ಕೆ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಸಿಬ್ಬಂದಿ ಸತತ ಪರಿಶ್ರಮದ ನಂತರ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮತ್ತೆ ಎಲ್ಲಿಯೂ ಬೆಂಕಿ ಹೊತ್ತಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಕೂಲಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಅಹಮದಾಬಾದ್ ಮೇಯರ್ ಹಿತೇಶ್ ಬರೋಟ್, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹಿರಿಯ ಅಧಿಕಾರಿಗಳು ಹಾಗೂ ನಾಗರಿಕ ಆಡಳಿತದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದರು. ವಲಯ-8ರ ಉಪ ಪೊಲೀಸ್ ಕಮಿಷನರ್ ಮಯೂರ್ ಪಾಟೀಲ್ ಮತ್ತು ವಲಯ-2ರ ಜಂಟಿ ಪೊಲೀಸ್ ಕಮಿಷನರ್ ಜೈಪಾಲ್ ಸಿಂಗ್ ರಾಥೋಡ್ ಕೂಡ ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಫೋಟಕ್ಕೆ ನಿಖರ ಕಾರಣವೇನು ಮತ್ತು ನಿಯಮಗಳನ್ನು ಮೀರಿ ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸುತ್ತಿರುವುದರ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Join WhatsApp

Join Now

Join Telegram

Join Now