ಬೆಂಗಳೂರು.ಜುಲೈ.31 : ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಮತ್ತೆ ಕಿಡಿ ಹೊತ್ತಿಕೊಂಡಿದೆ. ತಮಿಳುನಾಡಿಗೆ ದಿನವೂ ನೀರು ಹರಿಸುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ನೀಡಿದ ಆದೇಶವನ್ನು ವಿರೋಧಿಸಿ, ಆಗಸ್ಟ್ 13ರಂದು ಇಡೀ ರಾಜ್ಯ ಬಂದ್ ಆಚರಿಸಲು ವಿವಿಧ ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿಯು ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಕರ್ನಾಟಕಕ್ಕೆ ಸೂಚಿಸಿದೆ. ಈ ನಿರ್ಧಾರಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಜಲಾಶಯಗಳಲ್ಲಿಯೇ ಕುಡಿಯುವ ನೀರಿಗೆ ಕೊರತೆ ಎದುರಾಗಿರುವಾಗ, ನೆರೆ ರಾಜ್ಯಕ್ಕೆ ನೀರು ಹರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೋರಾಟಗಾರರು ಗುಡುಗಿದ್ದಾರೆ.
ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ಕನ್ನಡಪರ ಸಂಘಟನೆಗಳ ಮಹತ್ವದ ಸಭೆಯ ಬಳಿಕ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್ ನಿರ್ಧಾರವನ್ನು ಪ್ರಕಟಿಸಿದರು. ಆಗಸ್ಟ್ 13ರ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ವಯಂಪ್ರೇರಿತ ಬಂದ್ ನಡೆಯಲಿದೆ. ಅಂದು ವಿದ್ಯಾರ್ಥಿಗಳಿಗೆ ಯಾವುದೇ ಪ್ರಮುಖ ಪರೀಕ್ಷೆಗಳು ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು ಈ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಹೆಸರು ಉಲ್ಲೇಖಿಸಿ ನೇರ ಎಚ್ಚರಿಕೆ ನೀಡಿದರು. “ವಿಜಯ್ ಅವರ ಮೇಲೆ ನಮಗೆ ಗೌರವವಿದೆ, ಅವರು ಉತ್ತಮ ವ್ಯಕ್ತಿ. ಆದರೆ ಕಾವೇರಿ ವಿಚಾರದಲ್ಲಿ ನಾಟಕೀಯ ಸಭೆಗಳನ್ನು ನಡೆಸುವುದನ್ನು ನಾವು ಒಪ್ಪುವುದಿಲ್ಲ. ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ನಿರ್ಧಾರಗಳ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ಸರ್ಕಾರ ಸರ್ವಪಕ್ಷ ಸಭೆ ಕರೆದು ಕಾಲಹರಣ ಮಾಡುವುದು ಬಿಟ್ಟು ಗಟ್ಟಿ ನಿಲುವು ತಳೆಯಬೇಕು. ನಮ್ಮನ್ನು ಜೈಲಿಗೆ ಹಾಕಿದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದಿದ್ದಾರೆ. ಇದೇ ವೇಳೆ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.









