Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಯೂಸರ್‌ ನೇಮ್ ಪರಿಶೀಲನೆಗೆ ವಾಟ್ಸಾಪ್ ಬಳಿಕ ಟೆಲಿಗ್ರಾಮ್‌, ಸಿಗ್ನಲ್‌ ಗೂ ಕೇಂದ್ರ ಸರ್ಕಾರದಿಂದ ನೋಟಿಸ್

---Advertisement---

ದೆಹಲಿ.ಜುಲೈ.03: ಕೇಂದ್ರ ಸರ್ಕಾರವು ಸೈಬರ್ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಮುಖ ಮೆಸೇಜಿಂಗ್ ಆ್ಯಪ್‌ ಗಳಾದ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ ಗೆ ಬಿಗ್ ಶಾಕ್ ನೀಡಿದೆ. ಆನ್‌ ಲೈನ್ ವಂಚನೆಗಳು ಮತ್ತು ನಕಲಿ ಗುರುತಿನ (ಇಂಪರ್ಸನೇಷನ್) ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈಗ ಹೊಸದಾಗಿ ‘ಯೂಸರ್‌ ನೇಮ್’ ವೈಶಿಷ್ಟ್ಯದ ತಪಾಸಣೆಗೆ ಮುಂದಾಗಿದೆ.

ಇತ್ತೀಚೆಗೆ ವಾಟ್ಸಾಪ್ ಮೊಬೈಲ್ ಸಂಖ್ಯೆ ಇಲ್ಲದೆಯೇ ಸಂವಹನ ನಡೆಸಲು ಅನುವಾಗುವಂತೆ ‘ಯೂಸರ್‌ನೇಮ್’ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿತ್ತು. ಆದರೆ, ಇದು ಸೈಬರ್ ಕ್ರಿಮಿನಲ್‌ಗಳಿಗೆ ವರದಾನವಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಸರ್ಕಾರ, ಮೆಟಾ ಸಂಸ್ಥೆಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಸರ್ಕಾರದೊಂದಿಗೆ ಸಂಪೂರ್ಣ ಸಮಾಲೋಚನೆ ಮುಗಿಯುವವರೆಗೆ ಈ ವೈಶಿಷ್ಟ್ಯವನ್ನು ಜಾರಿಗೆ ತರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ವಾಟ್ಸಾಪ್ ಬೆನ್ನಲ್ಲೇ ಈಗಾಗಲೇ ಈ ಸೌಲಭ್ಯವನ್ನು ಹೊಂದಿರುವ ಟೆಲಿಗ್ರಾಮ್ ಮತ್ತು ಸಿಗ್ನಲ್ ಆ್ಯಪ್‌ಗಳಿಗೂ ನೋಟಿಸ್ ವಿಸ್ತರಿಸಲಾಗಿದ್ದು, ದುರುಪಯೋಗ ತಡೆಯಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಣೆ ಕೇಳಲಾಗಿದೆ. ವಿಶೇಷವಾಗಿ ಟೆಲಿಗ್ರಾಮ್‌ನಲ್ಲಿ ಯೂಸರ್‌ನೇಮ್ ವೈಶಿಷ್ಟ್ಯವನ್ನು ಮುಂದುವರಿಸಲು ಏಕೆ ಅವಕಾಶ ನೀಡಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಫೋನ್ ನಂಬರ್ ಬಹಿರಂಗಪಡಿಸದೆ ಕೇವಲ ಯೂಸರ್‌ನೇಮ್ ಮೂಲಕ ಚಾಟ್ ಮಾಡುವ ಸೌಲಭ್ಯದಿಂದಾಗಿ ಡಿಜಿಟಲ್ ಅರೆಸ್ಟ್, ಆನ್‌ಲೈನ್ ವಂಚನೆ ಹಾಗೂ ಫಿಶಿಂಗ್ ದಾಳಿಗಳು ಗಣನೀಯವಾಗಿ ಹೆಚ್ಚಾಗಬಹುದು ಎಂಬುದು ಸರ್ಕಾರದ ಮುಖ್ಯ ಆತಂಕವಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೆಟಾ ಸಂಸ್ಥೆಗೆ ಎಚ್ಚರಿಸಲಾಗಿದೆ.

ತನ್ನ ಹೊಸ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ವಾಟ್ಸಾಪ್, ನಕಲಿ ಖಾತೆಗಳ ಸೃಷ್ಟಿ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ. ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಅಧಿಕೃತ ಸರ್ಕಾರಿ ಸಂಸ್ಥೆಗಳ ಯೂಸರ್‌ನೇಮ್‌ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸಲಾಗಿದ್ದು, ಬೇರೆಯವರು ಅವುಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಪ್ರಮುಖ ಹೆಸರುಗಳನ್ನು ಹೋಲುವ ನಕಲಿ ಹೆಸರುಗಳ ನೋಂದಣಿಗೂ ಅವಕಾಶ ನೀಡುವುದಿಲ್ಲ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ 50 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ಗೆ ಇದು ಜಾಗತಿಕವಾಗಿ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಈ ಹಿಂದೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿವಾದಗಳಲ್ಲಿ ಸಿಲುಕಿ ತಾತ್ಕಾಲಿಕ ನಿಷೇಧ ಎದುರಿಸಿದ್ದ ಟೆಲಿಗ್ರಾಮ್‌ಗೆ ಈಗ ಕೇಂದ್ರದ ಹೊಸ ನೋಟಿಸ್ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Join WhatsApp

Join Now

Join Telegram

Join Now