ಸರ್ಕಾರದ ವಾಲ್ಮೀಕಿ ಜಯಂತಿಗೆ ಬಹಿಷ್ಕಾರ : ಸ್ವಾಮೀಜಿಯವರಿಗೆ ಬೆಂಬಲ ಸೂಚಿಸಿ ಫ್ರೀಡಂ ಪಾರ್ಕಿನಲ್ಲೇ ವಾಲ್ಮೀಕಿ ಜಯಂತಿ ಆಚರಣೆ : ಹೆಚ್.ಜೆ.ಕೃಷ್ಣಮೂರ್ತಿ

1 Min Read

 

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಅ.06) : ಶೇ 7.5 ಮೀಸಲಾತಿಗಾಗಿ ನಮ್ಮ ಜನಾಂಗದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಳೆದ 238 ದಿನಗಳಿಂದ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಇದೇ ತಿಂಗಳ 9 ರಂದು ಸರ್ಕಾರದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸದೆ ಧರಣಿಯಲ್ಲಿ ಪಾಲ್ಗೊಂಡು ಸ್ವಾಮೀಜಿಗೆ ಬೆಂಬಲಿಸುವುದಾಗಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶೇ.7.5 ಮೀಸಲಾತಿಗಾಗಿ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಾಗಮೋಹನ್‍ದಾಸ್ ವರಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಮೀಸಲಾತಿ ನೀಡುವಂತೆ ನಮ್ಮ ಸ್ವಾಮೀಜಿ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಈ ಬಾರಿಯ ಸರ್ಕಾರದ ವಾಲ್ಮೀಕಿ ಜಯಂತಿಗೆ ಬದಲಾಗಿ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾದ್ಯಂತ ನಾಯಕ ಜನಾಂಗ ಸೇರಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತೇವೆ. ಇದಕ್ಕೂ ರಾಜ್ಯ ಸರ್ಕಾರ ಮಣಿಯದಿದ್ದರೆ ದೆಹಲಿಯಲ್ಲಿ ರೈತರು ನಡೆಸಿದ ಚಳುವಳಿ ರೀತಿಯಲ್ಲಿ ನಾವುಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.

ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ ಸರ್ಕಾರದಿಂದ ನಡೆಯುವ ವಾಲ್ಮೀಕಿ ಜಯಂತಿಗೆ ನಾವುಗಳು ಯಾರು ಹೋಗುವುದಿಲ್ಲ. ರಾಜ್ಯಾದ್ಯಂತ 224 ಕ್ಷೇತ್ರಗಳಿಂದ ನಾಯಕ ಜನಾಂಗದವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿ ಮೀಸಲಾತಿಗಾಗಿ ನಮ್ಮ ಸ್ವಾಮೀಜಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳುತ್ತೇವೆ. ಸರ್ಕಾರ ಎಲ್ಲಿಯವರೆಗೆ ಮೀಸಲಾತಿಯನ್ನು ಘೋಷಿಸುವುದಿಲ್ಲವೋ ಅಲ್ಲಿಯತನಕ ಜಾಗ ಬಿಟ್ಟು ಕದಲುವುದಿಲ್ಲ. ಚಾಪೆ ದಿಂಬಿನ ಸಮೇತ ಧರಣಿಗೆ ಸಿದ್ದರಿದ್ದೇವೆ ಎಂದು ಹೇಳಿದರು.

ವಾಲ್ಮೀಕಿ ಜನಾಂಗಕ್ಕೆ ನೀಡಿರುವ ರಜೆಯನ್ನು ಸರ್ಕಾರ ಹಿಂದಕ್ಕೆ ಪಡೆಯಲಿ. ನಮ್ಮ ಜನಾಂಗದ ಯಾರಿಗೂ ವಾಲ್ಮೀಕಿ ಪ್ರಶಸ್ತಿಯನ್ನೂ ಕೊಡುವುದು ಬೇಡ. ನಮಗೆ ಬೇಕಾಗಿರುವುದು ಮೀಸಲಾತಿ. ಈ ನಿಟ್ಟಿನಲ್ಲಿ ಹೋರಾಟವನ್ನು ಚುರುಕುಗೊಳಿಸಲಾಗುವುದೆಂದರು.

ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ನಾಯಕ ಸಮಾಜದ ಮುಖಂಡರುಗಳಾದ ಡಿ.ಗೋಪಾಲಸ್ವಾಮಿ ನಾಯಕ, ಕಾಟಿಹಳ್ಳಿ ಕರಿಯಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *