ಸುದ್ದಿಒನ್, ಬೆಂಗಳೂರು, ಡಿಸೆಂಬರ್.01. : ಇಂದು ನಗರದ 15 ಶಾಲೆಗಳಿಗೆ ಅಪರಿಚಿತ ವ್ಯಕ್ತಿಗಳು ಇ ಮೇಲ್ ಮಾಡಿ ಕಟ್ಟಡಗಳನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ವಿದ್ಯಾರ್ಥಿಗಳು, ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸ್ಥಳಾಂತರಿಸಿ ಮನೆಗೆ ಕಳುಹಿಸಲಾಗಿದೆ. ಬಳಿಕ ಆಯಾ ಶಾಲೆಗಳಲ್ಲಿ ಕೂಲಂಕುಷವಾಗಿ ತಪಾಸಣೆ ನಡೆಸಲಾಗುತ್ತಿದೆ. ಆದರೆ, ಇದು ದುಷ್ಕರ್ಮಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
ಮೊದಲಿಗೆ ಬಸವೇಶ್ವರನಗರದ ವಿದ್ಯಾಶಿಲ್ಪಾ ಶಿಕ್ಷಣ ಸಂಸ್ಥೆ ಸೇರಿದಂತೆ ಏಳು ಶಾಲೆಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಮೇಲ್ ಕಳುಹಿಸಿದ್ದರು. ಇವುಗಳಲ್ಲಿ ಒಂದು ಶಾಲೆಯು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸದ ಎದುರು ಇದೆ. ಕೆಲವೇ ಸಮಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಇ-ಮೇಲ್ ಮೂಲಕ ಇದೇ ರೀತಿಯ ಬೆದರಿಕೆಗಳು ಬಂದಿವೆ. ಈ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಭದ್ರತಾ ಕ್ರಮಗಳ ಭಾಗವಾಗಿ ಶಾಲೆಗಳಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತೆರವುಗೊಳಿಸಿದರು.
ಬಾಂಬ್ ಬೆದರಿಕೆ ಹುಸಿ ಎಂಬ ಸೂಚನೆಗಳಿದ್ದರೂ ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ತೀವ್ರ ಶೋಧ ನಡೆಸುತ್ತಿದ್ದಾರೆ. ಯಾವುದೇ ಶಾಲೆಯಲ್ಲಿ ಬಾಂಬ್ ಇರುವುದನ್ನು ಅವರು ಇನ್ನೂ ಖಚಿತಪಡಿಸಿಲ್ಲ. ಕಳೆದ ವರ್ಷ ಬೆಂಗಳೂರಿನ ಹಲವು ಶಾಲೆಗಳಿಗೆ ಇದೇ ರೀತಿಯ ಇ-ಮೇಲ್ ಬೆದರಿಕೆಗಳು ಬಂದಿದ್ದವು. ಆದರೆ ಅದು ನಕಲಿ ಎಂದು ತಿಳಿದುಬಂದಿದೆ.
ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ದಯಾನಂದ್ ಮಾತನಾಡಿ, ಹಲವು ಬಾಂಬ್ ನಿಷ್ಕ್ರಿಯ ತಂಡಗಳು ಶಾಲಾ ಆವರಣದಲ್ಲಿ ತಪಾಸಣೆ ನಡೆಸುತ್ತಿವೆ. ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಇದು ಹುಸಿ ಮೇಲ್ ಎಂದು ತೋರುತ್ತಿದೆ. ಶೀಘ್ರವೇ ಶೋಧ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತೇವೆ. ಆದರೆ, ಪೋಷಕರು ಗಾಬರಿಯಾಗದಂತೆ ವಿನಂತಿಸುತ್ತೇವೆ ಎಂದರು. ಕಳೆದ ವರ್ಷವೂ ನಗರದ ಹಲವು ಶಾಲೆಗಳಿಗೆ ದುಷ್ಕರ್ಮಿಗಳು ಇದೇ ರೀತಿಯ ಇಮೇಲ್ ಕಳುಹಿಸಿದ್ದರು.