ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 02 : ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳು ಆಧುನೀಕತೆ ಅಬ್ಬರದ ಬಿರುಗಾಳಿಗೆ ತನ್ನ ನೆಲೆ ಕಳೆದುಕೊಳ್ಳುತ್ತಿದ್ದು, ಸಂಪ್ರಾದಾಯ, ಮೂಲಾಚರಣೆಗಳು ಸಂಪೂರ್ಣ ಕಣ್ಮರೆಯಾಗುತ್ತಿವೆ. ಇನ್ನೂ ಹಬ್ಬದ ಹೆಸರಲ್ಲಿ ನಡೆಯುತ್ತಿದ್ದ ಜನಪಯೋಗಿ ಕಾರ್ಯಕ್ರಮಗಳು, ದಾನ-ಧರ್ಮಗಳು ಕ್ಷೀಣಿಸುತ್ತಿವೆ. ಹಬ್ಬದ ಉತ್ಸವ-ಮೆರವಣಿಗೆ ಎಂದಾಕ್ಷಣ ಕುಣಿದು ಕುಪ್ಪಳಿಸುವುದು, ಆಡಂಬರವೆಂಬಂತಾಗಿದೆ.
ಇದಕ್ಕೆ ಅಪವಾದವೆಂಬಂತೆ ನಗರದ ಕರುವಿನಕಟ್ಟೆ ಯುವಕರ ಬಳಗ ಆಯೋಜಿಸಿರುವ ಕುರುವಿನಕಟ್ಟೆ ಕಾ ಮಹಾರಾಜ ಗಣಪತಿ ಉತ್ಸವ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿದಿನ ಜನಪರ ಕಾರ್ಯಕ್ರಮಗಳ ಮೂಲಕ ಗಮನಸೆಳೆಯುತ್ತಿರುವ ಗಣೇಶೋತ್ಸವ, ಆರೋಗ್ಯ
ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಮಾದರಿಯಾಗಿತ್ತು. ಕರುವಿನಕಟ್ಟೆ ಯುವಕರ ಬಳಗದ ಸದಸ್ಯರು ಸೇರಿ ಅನೇಕ ಯುವಕರು ರಕ್ತದಾನ ಮಾಡುವ ಮೂಲಕ ಗಣಪನಿಗೆ ಭಕ್ತಿ ಸಮರ್ಪಿಸಿದರು.
ಜಿಲ್ಲಾಸ್ಪತ್ರೆಯ ನರ್ಸಿಂಗ್ ಮುಖ್ಯಾಧಿಕಾರಿ ಡಾ.ರೂಪಾ ಮಾತನಾಡಿ, ಹಬ್ಬ, ಉತ್ಸವ, ದೇವರ ಹೆಸರಲ್ಲೂ ಜನಪರ ಕಾರ್ಯ ಮಾಡಬಹುದು. ಈ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು. ಈ ನಿಟ್ಟಿನಲ್ಲಿ ಕರುವಿನಕಟ್ಟೆ ಯುವಕರ ಬಳಗದ ಕಾರ್ಯ ಮಾದರಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನ ಕುರಿತು ತಪ್ಪು ಅಭಿಪ್ರಾಯಗಳು ದೂರಗೊಳ್ಳಬೇಕು. ರಕ್ತದಾನದಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಜೊತೆಗೆ ಆರೋಗ್ಯ ವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ. ಮುಖ್ಯವಾಗಿ ಮತ್ತೊಂದು ಜೀವ ಉಳಿಸಿದ ಆತ್ಮತೃಪ್ತಿ ಲಭಿಸಲಿದೆ. ಆದ್ದರಿಂದ ರಕ್ತದಾನದ ಮನಸ್ಸುಗಳು ಹೆಚ್ಚಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಶುಶ್ರೂಷಕ ಮಲ್ಲಣ್ಣ ಮಾತನಾಡಿ, ಎಲ್ಲ ಜಾತಿ-ಧರ್ಮಗಳ ಉತ್ಸವ, ಹಬ್ಬಗಳಲ್ಲಿ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಸಮಾಜಸೇವೆಗೆ ಹಬ್ಬಗಳನ್ನು ಮೀಸಲಿಡಬೇಕು ಎಂದರು.
25ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡುವ ಮೂಲಕ ಮಾದರಿ ಆಗಿದ್ದಾರೆ. ಇಂತಹ ಕಾರ್ಯಗಳನ್ನು ಇತರೆಡೆ ಧಾರ್ಮಿಕ ವೇದಿಕೆಗಳಲ್ಲೂ ಆಚರಣೆಗೆ ತರಬೇಕು. ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡರೇ ದೇವರು ತೃಪ್ತನಾಗುತ್ತಾನೆ ಎಂದು ತಿಳಿಸಿದರು.
ಸುಸಂಸ್ಕೃತರ ಸಂಖ್ಯೆ ಹೆಚ್ಚಿಸುವ ರೀತಿ ಹಬ್ಬಗಳನ್ನು ಆಚರಿಸಬೇಕು. ಇಲ್ಲದಿದ್ದರೇ ಯುವಪೀಳಿಗೆ ದಾರಿ ತಪ್ಪಿ ಸಮಾಜಕ್ಕೆ ಕಂಟಕ ಆಗುತ್ತಾರೆ. ಈ ನಿಟ್ಟಿನಲ್ಲಿ ಗಣಪತಿ ಸೇರಿ ವಿವಿಧ ಉತ್ಸವಗಳನ್ನು ಸಂಘಟಿಸುವವರು ಚಿಂತನೆ ನಡೆಸಬೇಕು ಎಂದರು. ಸಂಘಟಕ ಸಿ.ಅಜಯ್ ಇತರರು ಮಾತನಾಡಿ, ಗಣಪತಿ ಉತ್ಸವಕ್ಕೆ ಜನಪರ ಕಾರ್ಯದ ಮೆರುಗು ತರುವ ಪ್ರಯತ್ನ ಮಾಡಲಾಗಿದೆ. ಮುಂದಿನ ವರ್ಷದಿಂದ ಪ್ರತಿದಿನ ಜನರಿಗೆ ಉಪಯೋಗ ಆಗುವ
ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಂಘಟಕರಾದ ರೋಹಿತ್, ರಘು, ಗಗನದೀಪ್ ಮಾತನಾಡಿ, ಸೆ.12ರ ಭಾನುವಾರ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಅನ್ನಸಂತರ್ಪಣೆ, ಪ್ರಸಾದ ವಿತರಣೆ, ವಿಶೇಷ ಪೂಜೆ ಬಳಿಕ ಮೆರವಣಿಗೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಂಘಟಕರಾದ ಸಿ.ಅಜಯ್, ಅಜಯನಾಯಕ, ದೀರಜ್, ಕಿರಣ್, ಮಣಿ ನಾಯಕ, ಅಖಿಲೇಶ್, ದೀಪು, ಗಗನದೀಪ್, ಪುನೀತ್, ರೋಹಿತ್, ಸ್ವಾಮಿ, ರಾಜು, ರವಿ, ರಘು ಇತರರರಿದ್ದರು.


