ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಹಾಗೂ ರತ್ನಮ್ಮ ಇಬ್ಬರು ಅಂಧರು. ಕಣ್ಣು ಕಾಣಿಸದೇ ಇದ್ದರು ಕಂಠಕ್ಕೇನು ಕಡಿಮೆ ಇರಲಿಲ್ಲ. ದೇವಸ್ಥಾನಗಳಲ್ಲಿ ಹಾಡು ಹಾಡುತ್ತಿದ್ದ ಈ ಇಬ್ಬರು ಸಹೋದರಿಯರನ್ನ ಜೀ ಕನ್ನಡ ವೇದಿಕೆ ಗುರುತಿಸಿತ್ತು. ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗಿದ್ದರು. ಹುಟ್ಟಿನಿಂದಲೇ ಇಬ್ಬರಿಗೂ ಕಣ್ಣು ಕಾಣಿಸುತ್ತಿರಲಿಲ್ಲ. ಸರಿಗಮಪ ಕಾರ್ಯಕ್ರಮದ ಮೂಲಕ ಎಲ್ಲರ ಮನಸ್ಸು ಗೆದ್ದರು. ನಟ ಜಗ್ಗೇಶ್ ಅವರು ಇವರು ಇರುವುದಕ್ಕೆ ಊರಿನಲ್ಲಿಯೇ ಮನೆಯನ್ನು ಕಟ್ಟಿಸಿಕೊಟ್ಟರು. ಆದರೆ ಅಕ್ಕತಂಗಿಯರಲ್ಲಿ ಒಬ್ಬರು ಜೀವನದ ಪಯಣ ಮುಗಿಸಿದ್ದಾರೆ.

ಮಂಜಮ್ಮ ಎಲ್ಲರನ್ನ ಬಿಟ್ಟು ಹೊರಟಿದ್ದಾರೆ. ಮಂಜಮ್ಮ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಎಲ್ಲಿಯೇ ಹೋದರೂ ರತ್ನಮ್ಮ ಹಾಗೂ ಮಂಜಮ್ಮ ಜೊತೆ ಜೊತೆಯಾಗಿಯೇ ಇರುತ್ತಿದ್ದರು. ಆದರೆ ಈಗ ಮಂಜಮ್ಮ ಕೊನೆಯುಸಿರೆಳೆದಿದ್ದು, ರತ್ನಮ್ಮ ಒಬ್ಬಂಟಿಯಾಗಿದ್ದಾರೆ. ಮುಂದೆ ಹೇಗೆ ಜೀವನ ನಡೆಸುತ್ತಾರೆ ಎಂಬುದೇ ಹಲವರ ಚಿಂತೆಯಾಗಿದೆ.

ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡಿದ್ದ ಮಂಜಮ್ಮ ಹಾಗೂ ರತ್ನಮ್ಮ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದರು. ಇರುವುದಕ್ಕೆ ಸರಿಯಾದ ಸೂರು ಕೂಡ ಇರಲಿಲ್ಲ. ಜೀವನ ನಡೆಸುವುದಕ್ಕೂ ಕಷ್ಟವಾಗಿತ್ತು. ಹಾಡು ಬರುತ್ತಿದ್ದ ಕಾರಣ ಬಸ್ ನಿಲ್ದಾಣಗಳಲ್ಲಿ ಹಾಡು ಹೇಳಿಕೊಂಡು ಜೀವನ ಸಾಗಿಸುತ್ತಿದ್ದರು. ಬಳಿಕ ಮಧುಗಿರಿಯ ದಂಡಿನ ಮಾರಮ್ಮ ದೇವಸ್ಥಾನದ ಮುಂದೆ ಹಾಡು ಹೇಳಿ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಸದಾ ಜೊತೆಯಾಗಿದ್ದ ಮಂಜಮ್ಮನ ಅಗಲಿಕೆಯಿಂದಾಗಿ ರತ್ನಮ್ಮ ಮೌನಿಯಾಗಿದ್ದಾರೆ. ಏನು ಮಾಡಬೇಕು ಎಂಬುದೇ ತೋಚದಂತೆ ಆಗಿದೆ.


