ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ, ನಮ್ಮ ರಾಮ ಎಲ್ಲೆಡೆಯೂ ಇದ್ದಾನೆ, ನಾವೆಲ್ಲಾ ಶ್ರೀರಾಮನ ಭಕ್ತರು : ಮಾಜಿ ಸಚಿವ ಹೆಚ್ ಆಂಜನೇಯ

1 Min Read

ಸುದ್ದಿಒನ್, ಚಿತ್ರದುರ್ಗ, ಜನವರಿ. 01 : ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ಇತ್ತ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯಗೆ ಆಹ್ವಾನ ನೀಡಿಲ್ಲವೆಂಬ ವಿಚಾರವಾಗಿ ಮಾಜಿ ಸಚಿವ ಹೆಚ್.ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ‌.

ನಗರದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ ನಿಡೀದ್ದು, ರಾಮಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆಯದಾಯಿತು. ಸ್ವತ: ಸಿದ್ಧರಾಮಯ್ಯ ಅವರೇ ರಾಮ, ಅಯೋಧ್ಯೆಗೆ ಹೋಗಿ ಅಲ್ಲಿ ರಾಮನಿಗೇಕೆ ಹೋಗಿ ಪೂಜಿಸಬೇಕು. ಸಿದ್ಧರಾಮನಹುಂಡಿಯಲ್ಲಿ ರಾಮನ ದೇವಸ್ಥಾನ ಇದೆ, ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ. ಅಲ್ಲಿ ಬಿಜೆಪಿಯವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ. ನಮ್ಮ ರಾಮ ಎಲ್ಲಾ ಕಡೆಗೂ ಇದ್ದಾನೆ, ನಾನು ಆಂಜನೇಯ ನಾವೆಲ್ಲಾ ಶ್ರೀರಾಮನ ಭಕ್ತರು ಎಂದಿದ್ದಾರೆ.

ನಮ್ಮ ಸಮುದಾಯದವರು ರಾಮ, ಆಂಜನೇಯ, ಹನುಮಂತ ಹೆಸರಿಟ್ಟುಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು. ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಠಿಯ ಭ್ರಮೆ ಬಿಜೆಪಿಗಿದೆ. ಬಿಜೆಪಿ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ?. ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ?.

ನಾವೆಲ್ಲಾ ಹಿಂದೂಗಳೇ, ಹಿಂದೂ, ಹಿಂದೂ ಧರ್ಮವನ್ನ ಬಿಜೆಪಿ ಕೊಂಡುಕೊಂಡಿಲ್ಲ. ಧರ್ಮದಲ್ಲಿನ ಮೇಲು ಕೀಳು, ಶೋಷಣೆಗೆ ಪರಿಹಾರ ನೀಡಿದ್ದಾರೆಯೇ?. ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು. ದೇಶದ ಜನ ನಾಯಿ ನರಿ ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲಿ ವಾಸವಾಗಿದ್ದಾರೆ. ಅಂಥವರ ಕಣ್ಣಿರೊರೆಸಿ ಸೂರುಕೊಟ್ಟು ರಕ್ಷಣೆ ಮಾಡುವ ಕೆಲಸ ಆಗಲಿ. ಸೂರಿಲ್ಲದವರಿಗೆ ಮನೆ ಕಟ್ಟಿಸಿ ರಾಮಮಂದಿರ ಅಂತ ಹೆಸರಿಡಿ. ಆಗ ನಿಜವಾದ ರಾಮ ಬಂದು ಆಶೀರ್ವದಿಸುತ್ತಾನೆ. ಓಟಿನ ರಾಮ ಅಲ್ಲ, ಓಟಿಗಾಗಿ ಬಿಜೆಪಿ ರಾಮನ ಮಾಡುವುದು ಬೇಡ ಎಂದು ಬಿಜೆಪಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *