ಬೆಂಗಳೂರು: ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಯುತ್ತೆ ಎಂಬ ಮಾತುಗಳು ಕೇಳಿ ಬರ್ತಾನೆ ಇದೆ. ಇದೀಗ ಅದಕ್ಕೆ ಪುಷ್ಟಿ ನೀಡುವಂತ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಲು ದಿನಾಂಕ ನಿಗದಿ ಮಾಡಿದ್ದಾರೆ. ಜನವರಿ 8 ಮತ್ತು 9 ರಂದು ನಂದಿ ಬೆಟ್ಟದಲ್ಲಿ ಸಭೆ ನಡೆಸಲು ಸಜ್ಜಾಗಿದ್ದಾರೆ.
ಕೆಲ ಸಚಿವ ಕಾರ್ಯವೈಖರಿ ಹೈಕಮಾಂಡ್ ಗೆ ಅತೃಪ್ತಿ ತಂದಿದ್ದು, ಅವರ ಜೊತೆ ಹೈಕಮಾಂಡ್ ನಾಯಕರು ಸಭೆ ನಡೆಸಲಿದ್ದಾರೆ. ಜೊತೆಗೆ ಕೋರ್ ಕಮಿಟಿ ಸಭೆ, ಪದಾಧಿಕಾರಿಗಳ ಜೊತೆಗೂ ಸಭೆ ನಿಗದಿಯಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಚಿವರ ಕಾರ್ಯವೈಖರಿ, ಮೌಲ್ಯಮಾಪನ, ಪಕ್ಷ ಸಂಘಟನೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.