ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಇಂದು ಜೆಡಿಎಸ್ ಭದ್ರಕೋಟೆಯಲ್ಲಿ ಸಂಚರಿಸಿದೆ. ಇಂದು ಸುದ್ದಿಗೋಷ್ಟಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಎರಡು ರಾಷ್ಟೀಯ ಪಕ್ಷಗಳನ್ನು ಜನರನ್ನು ಸೆಳೆಯಲು ಮಾಡುತ್ತಿರುವ ಬೃಹತ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.
ಇತ್ತಿಚೆಗೆ ತಮ್ಮ ಶಕ್ತಿ ಪ್ರದರ್ಶನ ಮಾಡುವುದಕ್ಕೆ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ನವರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಇದರ ಉದ್ದೇಶ ಏನು ಎಂಬುದು ಜನರಿಗೆ ಗೊತ್ತಿದೆ. ಇನ್ನು ಬಿಜೆಪಿ ನಾಯಕರು ದೊಡ್ಡಬಳ್ಳಾಪುರದಲ್ಲಿ ಆ ಕಾರ್ಯಕ್ರಮದಲ್ಲಿ ತೊಡೆ ತಟ್ಟಿದ್ದು, ಶಕ್ತಿಪ್ರದರ್ಶನ ಬಿಟ್ಟರೆ ಇಷ್ಟು ವರ್ಷ ಸರ್ಕಾರ ಮಾಡಿದ ಕೆಲಸದ ಬಗ್ಗೆ ತಿಳಿಸಲೇ ಇಲ್ಲ ಎಂದಿದ್ದಾರೆ.
ಇನ್ನು ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಬಂದು ಪಾದಯಾತ್ರೆಯಲ್ಲಿ ಭಾಗವಹಿಸಿರುವ ಬಗ್ಗೆ ಮಾತನಾಡಿದ್ದು, ಸೋನಿಯಾ ಗಾಂಧಿ ಅವರು ವಿಶ್ರಾಂತಿಗಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಕೇವಲ ಬೆಂಬಲ ಸೂಚಿಸುವುದಕ್ಕೆ ಬಂದಿದ್ದು. ಕೆಲ ನಿಮಿಷ ನಡೆದು ಬಳಿಕ ಕಾರಿನಲ್ಲಿ ಪ್ರಯಾಣಿಸಿದರೆ ಏನು ಪ್ರಯೋಜನವಾಗುವುದಿಲ್ಲ. ಐದು ನಿಮಿಷ ಬಂದು ಹೋಗುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಅವರು ಭಾರತ್ ಜೋಡೋ ಯಾತ್ರೆಗಿಂತ ಕರ್ನಾಟಕ ಯಾತ್ರೆಯನ್ನೇ ಹೆಚ್ಚಾಗಿ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದಿದ್ದಾರೆ.