ಬೆಂಗಳೂರು: ಜೈನಮುನಿಯ ಹತ್ಯೆ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲು ಬಿಜೆಪಿ ತೀರ್ಮಾನ ಮಾಡಿದೆ. ಅಷ್ಟೇ ಅಲ್ಲ ರಾಜ್ಯದ ಹಲವೆಡೆ ಈಗಾಗಲೇ ನ್ಯಾಯಕ್ಕಾಗಿ ಪ್ರತಿಭಟನೆ ನಡೆಯುತ್ತಿವೆ. ಇಂದು ಬಿಜೆಪಿ ಕೂಡ ಸದನದ ಒಳಗೂ, ಹೊರಗು ಧರಣಿ ಕೂರಲು ನಿರ್ಧರಿಸಿದ್ದಾರೆ. ಜೊತೆಗೆ ಅಕ್ರಮ ವರ್ಗಾವಣೆ ದಂಧೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಹೇಳುತ್ತಿದ್ದ ಪೆನ್ ಡ್ರೈವ್ ವಿಚಾರಕ್ಕೂ ಧರಣಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಪ್ರಮುಖ ಆರೋಪಿಯ ಹೆಸರನ್ನ ಮರೆಮಾಚುತ್ತಿದೆ. ಪಾರದರ್ಶಕವಾಗಿ ತನಿಖೆ ನಡೆಸಿ ಎಂಬುದು ಬಿಜೆಪಿಯ ನಿರ್ಣಯ. ಹೀಗಾಗಿ ಒಳಗೂ ಮತ್ತು ಹೊರಗೂ ಪ್ರತಿಭಟನೆ ನಡೆಸಲು ಮುಂದಾಗಿದೆ. ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ.
ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದು, ಈ ರೀತಿಯ ಘಟನೆ ನಡೆದಾಗ ತಾರತಮ್ಯ ಯಾರು ಮಾಡಲ್ಲ. ಯಾರು ಅಪರಾಧಿಗಳಿದ್ದಾರೆ ತಕ್ಷಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಘಟನೆ ಆದ ಮೇಲೆ ಪೊಲೀಸರಿಗೆ ವಿಚಾರ ಗೊತ್ತಾದ ಕೂಡಲೆ ಪೊಲೀಸರು ಅಲರ್ಟ್ ಆಗಿದ್ದಾರೆ. ಆ ಮೃತದೇಹ ತೆಗೆಸಿ, ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಕಾನೂನಿನ ಬಗ್ಗೆ ನಂಬಿಕೆ ಇಡಿ ಎಂದಿದ್ದಾರೆ.