ನಾಯಕ ಸಮಾಜಕ್ಕೆ ಬಿಜೆಪಿ ವಂಚನೆ : ಮಾಜಿ ಸಚಿವ ಎಚ್.ಆಂಜನೇಯ

3 Min Read

ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿ ಸಾಲು ಸಾಲು ಸುಳ್ಳು ಭರವಸೆ ನೀಡಿ, ಬಹುಮತ ಗಳಿಸುವಲ್ಲಿ ವಿಫಲಗೊಂಡು ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಹಿಂದು ಧರ್ಮದ ಮಠಾಧೀಶರ ಮೇಲೆ ಗೌರವ ಇಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಚ್.ಆಂಜನೇಯ ಅವರು, ನಾಯಕ ವಾಲ್ಮೀಕಿ, ಪರಿಶಿಷ್ಟ ಸಮುದಾಯಕ್ಕೆ ಮೀಸಲು ಹೆಚ್ಚಳ,
ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ, ರಾಜಕೀಯ ಉನ್ನತ  ಸ್ಥಾನಮಾನ ನೀಡುವುದಾಗಿ ಬಿಜೆಪಿ ಚುನಾವಣೆ ಸಂದರ್ಭ ಭರವಸೆ ನೀಡಿತ್ತು.

ನಾಯಕ ಸಮುದಾಯದ ಮತ ಸೆಳೆಯಲು ಬಿ.ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಇವರನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಆಸೆ ತೋರಿಸಿ, ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸುತ್ತೇವೆ
ಎಂದು ಹೇಳಲಾಗಿತ್ತು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಸ್‌ಟಿ ಮೀಸಲಾತಿಯನ್ನು ಶೇ.7.5ಕ್ಕೆ
ಹೆಚ್ಷಿಸಲಾಗುವುದು. ಬೇಕಿದ್ದರೆ ಈಗಲೇ ರಕ್ತದಲ್ಲಿ ಬರೆದು ಕೊಡುತ್ತೇವೆ ಎಂದು ಬಿಜೆಪಿ
ಮುಖಂಡರು, ಬಹಿರಂಗವಾಗಿ ಹೇಳಿಕೆ ಮೂಲಕ ನಾಯಕ ಸಮುದಾಯವನ್ನು ನಂಬಿಸಿದ್ದರು.

ಪರಿಣಾಮ ಭ್ರಷ್ಟಾಚಾರ, ಕೋಮುವಾದ ಬಿಜೆಪಿ ಪಕ್ಷ ರಾಜ್ಯದಲ್ಲಿ ನಾಯಕ ವಾಲ್ಮೀಕಿ, ಪರಿಶಿಷ್ಡ ಸೇರಿ ಅನೇಕ ಸಮುದಾಯಗಳ ಮತ ಗಳಿಸಿ ಹೆಚ್ಚು ಸ್ಥಾನ ಗಳಿಸಿತು.
ಆದರೆ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನ ಮಾತಿನಲ್ಲಿ ಶೇ.1 ಪರ್ಸೆಂಟ್ ನ್ನು ಕೂಡ ಈಡೇರಿಸಿಲ್ಲ. ರಾಜಕೀಯ ಸ್ಥಾನ ಮಾನ ನೀಡಿಲ್ಲ, ಉಪಮುಖ್ಯಮಂತ್ರಿ ಕನಸು ಕಂಡಿದ್ದ ಬಿ.ಶ್ರೀರಾಮುಲು ಈಗಾಗಲೇ ಭ್ರಮನಿರಸನಗೊಂಡಿದ್ದಾರೆ. ಮಂತ್ರಿ ಆಗಿ ಉಳಿದರೆ ಸಾಕು ಎನ್ನುವ ಪರಿಸ್ಥಿತಿಯಲ್ಲಿದ್ದಾರೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ರಾಜನಹಳ್ಳಿಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನೇತಾರರು, ಈ ಬಾರಿ ಎಸ್‌ಟಿ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಲೇ ಕಾಲ ದೂಡಿದ್ದಾರೆ.

ತಾವೇ ನೇಮಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಈಗಾಗಲೇ ವರದಿ ನೀಡಿ  ಒಂದು ವರ್ಷಕ್ಕೂ ಹೆಚ್ಚು ಅವಧಿ ಆಗಿದೆ. ತನ್ನ ಸರ್ಕಾರ ನೇಮಿಸಿದ್ದ ಆಯೋಗ ನೀಡಿದ ವರದಿಯನ್ನು ಕಸದಬುಟ್ಟಿಗೆ ಬಿಜೆಪಿ ಸರ್ಕಾರ ಹಾಕಿದೆ.

ಪರಿಶಿಷ್ಟ ಪಂಗಡಕ್ಕೆ ಶೇ.4, ಪರಿಶಿಷ್ಟ ಜಾತಿಗೆ ಶೇ.2 ಮೀಸಲು ಹೆಚ್ಚಳ ಮಾಡಬೇಕೆಂದು ಆಯೋಗ ವರದಿ ನೀಡಿದೆ. ಇದನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಅನುಷ್ಠಾನಕ್ಕೆ ತರುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಉದಾಸೀನತೆ ತೋರಿದೆ.

ಇದರಿಂದ ಮನನೊಂದು ವಾಲ್ಮೀಕಿ ಸ್ವಾಮೀಜಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಪರಿಣಾಮ ನೂರು ದಿನಗಳಿಂದ ರಾಜನಹಳ್ಳಿ ವಾಲ್ಮೀಕಿ ನಾಯಕ ಮಠದ ಶ್ರೀ ಪ್ರಸನ್ನಾನಂದ
ಸ್ವಾಮೀಜಿ ಬೆಂಗಳೂರಿನಲ್ಲಿ ಚಳಿ, ಮಳೆ, ಗಾಳಿ, ಬಿಸಿಲು ಎನ್ನದೇ ಧರಣಿ ನಡೆಸುತ್ತಿದ್ದಾರೆ. ಕನಿಷ್ಠ ಪಕ್ಷ ಶ್ರೀಗಳ ಧರಣಿ ಸ್ಥಳಕ್ಕೆ ಸರ್ಕಾರ ಹೋಗಿ ಸ್ವಾಮೀಜಿಯ ಅವರ ಮನವೊಲಿಸುವ ಕಾರ್ಯವನ್ನು ಮಾಡಿಲ್ಲ.
ಬಾಯಿಬಿಟ್ಟರೇ ಧರ್ಮ, ಮಠಾಧೀಶರನ್ನು ನಾವು ಗೌರವಿಸುವ ಪಕ್ಷ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಮುಖಂಡರಿಗೆ ಹಿಂದೂ ಧರ್ಮದ ಮಠಾಧೀಶರ ಮೇಲೆ ಗೌರವ ಇಲ್ಲವೆಂಬುದು ವಾಲ್ಮೀಕಿ ಶ್ರೀಗಳ ಧರಣಿ ನೂರು ದಿನಕ್ಕೆ ಪೂರೈಸಿರುವುದೇ ಸಾಕ್ಷಿ ಆಗಿದೆ.

ಈ ಹಿನ್ನೆಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯ ರಾಜ್ಯಾದ್ಯಂತ ಮೇ 20ರಂದು ಕರೆ ನೀಡಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ಶುಕ್ರವಾರ ಶ್ರೀಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಅವರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ನೀಡಲಾಗುವುದು. ಅಗತ್ಯಬಿದ್ದರೆ ಶ್ರೀಗಳ ಸೂಚನೆ ಮೇರೆಗೆ ಹೋರಾಟ ರೂಪಿಸಲು ಎಲ್ಲ ರೀತಿ ಸಹಕಾರ ನೀಡಲಾಗುವುದು.

ಮೇ 20ರಂದು ನಡೆಯಲಿರುವ ನಾಯಕ ಸಮುದಾಯದ ಪ್ರತಿಭಟನೆ ಬಳಿಕವೂ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮೀಸಲು ಹೆಚ್ಚಳಕ್ಕೆ ಕ್ರಮಕೈಗೊಳ್ಳಲಿದ್ದಾರೆ
ಸುಳ್ಳಿನ ಕೆಸರಿನಲ್ಲಿ ಅರಳಿರುವ ಕಮಲಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್.ಆಂಜನೇಯ ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *