ಬಿಜೆಪಿಯ 40% ಕಮಿಷನ್ ಆರೋಪ ಸುಳ್ಳು ಎಂಬುದು ಲೋಕಾಯುಕ್ತ ತನಿಖೆಯಲ್ಲಿಯೇ ಸಾಬೀತು : ಬಿವೈ ವಿಜಯೇಂದ್ರ

suddionenews
2 Min Read

ಬೆಂಗಳೂರು: ಬಿಜೆಪಿ ವಿರುದ್ಧ 40% ಸರ್ಕಾರ ಎಂಬ ಆರೋಪವಿತ್ತು. ಆ ಬಗ್ಗೆ ಇದೀಗ ತನಿಖೆಯಾಗಿದ್ದು, ಈಗ ಬಿಜೆಪಿ ಆರೋಪ ಮುಕ್ತವಾಗಿದ್ದು, ಕಾಂಗ್ರೆಸ್ ಮೇಲೆ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

 

ಮಾನ್ಯ @BSBommai ಅವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 40% ಕಮಿಷನ್ ಎಂಬ ಸುಳ್ಳು ಅಪಪ್ರಚಾರ ನಡೆಸಿದ್ದ ಕಾಂಗ್ರೆಸ್ ಪಕ್ಷದ ಆರೋಪ ಆಧಾರರಹಿತ ಹಾಗೂ ಹಸೀ ಸುಳ್ಳು ಎಂಬುದು ಇದೀಗ ಲೋಕಾಯುಕ್ತ ತನಿಖೆಯಲ್ಲೇ ಬಹಿರಂಗವಾಗಿದೆ. ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವ @INCKarnataka ಹಾಗೂ ಕಾಂಗ್ರೆಸ್ ಸರ್ಕಾರ ತಾನು ಹೇಳುವುದೆಲ್ಲಾ ಸುಳ್ಳು, ಕಟ್ಟುಕಥೆ ಕಟ್ಟುವಲ್ಲಿ ತಾನು ನಿಸ್ಸೀಮ ಎಂಬುದು ಸಾಬೀತಾಗಿದೆ.

ನೈತಿಕ ಮಾರ್ಗದಲ್ಲಿ ಎಂದೂ ಅಧಿಕಾರ ಹಿಡಿಯದ ಕಾಂಗ್ರೆಸ್ಸಿಗರು ದುರ್ಮಾರ್ಗ, ಅನೀತಿ, ಅಪಪ್ರಚಾರ ಹಾಗೂ ಒಡೆಯುವ ಕೆಲಸಗಳಿಂದಲೇ ಅಧಿಕಾರ ಕಬಳಿಸಿದ್ದಾರೆ ಎಂಬುದಕ್ಕೆ ಪ್ರಸ್ತುತ ಬಹಿರಂಗವಾಗಿರುವ ಲೋಕಾಯುಕ್ತ ವರದಿ ಸಾಕ್ಷಿ ಹೇಳುತ್ತಿದೆ. ಕರ್ನಾಟಕದ ಜನತೆಯನ್ನು ವಂಚಿಸಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ @siddaramaiah ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅಧಿಕಾರದಿಂದ ಕೆಳಗಿಳಿದು ಕರ್ನಾಟಕದ ಜನತೆಯ ಕ್ಷಮೆ ಕೋರಲಿ ಎಂದು ಒತ್ತಾಯಿಸುತ್ತೇನೆ.

 

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗಲೇ ಲೋಕಾಯುಕ್ತ ತನಿಖಾ ವರದಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಕಾಂಗ್ರೆಸ್ಸಿಗರು ಇನ್ನೇನೂ ಸಮಜಾಯಿಸಿ ನೀಡುವುದಕ್ಕಾಗಲಿ, ವಿತಂಡವಾದ ಮಾಡುವುದಕ್ಕಾಗಲಿ ಅವಕಾಶವೇ ಇಲ್ಲ.  ಸದ್ಯ ಬಾಕಿ ಬಿಲ್ ಪಾವತಿಯಾಗದೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಗುತ್ತಿಗೆದಾರರು ರಾಜ್ಯದಲ್ಲಿರುವುದು 40% ಅಲ್ಲ 80% ಕಾಂಗ್ರೆಸ್ ಸರ್ಕಾರ ಎಂಬ ಅಸಲಿ ಸತ್ಯವನ್ನು ಬಹಿರಂಗ ಪಡಿಸುತ್ತಿದ್ದಾರೆ. ಒಂದರ ಮೇಲೊಂದು ಹಗರಣಗಳ ತನಿಖೆಯ ಕಾನೂನಿನ ಉರುಳು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಸುತ್ತಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಮಾರಾಟವಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳೇ ಅಧಿಕೃತ ಹೇಳಿಕೆ ನೀಡಿ ಕರ್ನಾಟಕದ ಗೌರವವನ್ನು ಹರಾಜು ಹಾಕುತ್ತಿದ್ದಾರೆ.

 

ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನೀಡುತ್ತಿದ್ದ ಮಾನ್ಯ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಆದರೆ ಇದೀಗ ತಮ್ಮ ಕರಾಳತೆಯ ಭ್ರಷ್ಟ ಮುಖವನ್ನು ಮುಚ್ಚಿಕೊಳ್ಳಲು ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಮಧ್ಯಂತರ ವರದಿಯನ್ನು ತರಾತುರಿಯಲ್ಲಿ ತರಿಸಿಕೊಂಡು #SIT ರಚಿಸಲು ಹೊರಟಿದ್ದೀರಿ ಈ ತನಿಕೆಯಿಂದಲೂ ನಿಮಗೆ ಮುಖಭಂಗವೇ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *