ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.18): ಕಾಂಗ್ರೆಸ್ ಹಿರಿಯ ಶಾಸಕ, ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ವಿವಾದಾತ್ಮಕ ರೇಪ್ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಭಾರತೀಯ ಜನತಾಪಾರ್ಟಿ ಜಿಲ್ಲಾ ಮಹಿಳಾ ಮೋರ್ಚದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಮೇಶ್‍ಕುಮಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿಕೊಳ್ಳುವ ಅರ್ಥದಲ್ಲಿ ಮಾತನಾಡಿರುವ ಹಿರಿಯ ಶಾಸಕ ರಮೇಶ್‍ಕುಮಾರ್ ಮಹಿಳಾ ಕುಲವನ್ನೇ ಕೀಳಾಗಿ ಅಮಾನಿಸಿದಂತಿದೆ. ಬೇಷರತ್ತಾಗಿ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು.
ಬಿಜೆಪಿ.ಮಹಿಳಾ ಮೋರ್ಚ ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಕಾಂಗ್ರೆಸ್‍ನಿಂದ ಇವರನ್ನು ಉಚ್ಚಾಟಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಜಿಲ್ಲಾ ಬಿಜೆಪಿ.ಮಹಿಳಾ ಮೋರ್ಚಾ ಅಧ್ಯಕ್ಷೆ ಆರ್.ಶೈಲಜಾರೆಡ್ಡಿ ಎಚ್ಚರಿಸಿದ್ದಾರೆ.
ಅತ್ಯಾಚಾರದ ಪದ ಬಳಸಿ ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ರಮೇಶ್‍ಕುಮಾರ್ ಆಡಿದ ಮಾತುಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಯಾವುದೇ ಕಾರಣಕ್ಕೂ ಮಹಿಳೆಯರು ಹಾಗೂ ಭಾರತೀಯ ಜನತಾಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ಕ್ಷಮಿಸುವುದಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಎಂ.ಅಂಬಿಕಾ ಪ್ರಸನ್ನಕುಮಾರ್, ಕವನ ರಾಘವೇಂದ್ರ, ಸರಸ್ವತಿ, ಪೂರ್ಣೇಶ್ವರಿ, ಬಸಮ್ಮ, ಗೀತಮ್ಮ, ಮಂಜುಳ, ವೀಣ, ಭಾರ್ಗವಿ ದ್ರಾವಿಡ್, ಪ್ರಿಯಾಂಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.