ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಮೇ.19) : ಐದು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿ ಕೊನೆಗೆ ಮೀಸಲಾತಿ ವರ್ಗಿಕರಣಕ್ಕೆ ಕೈಹಾಕಿದ ಬಿಜೆಪಿಗೆ ಬಂಜಾರ ಸಮಾಜ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದೆ ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಖಡಕ್ ಆಗಿ ನುಡಿದರು.
ಗುರುಪೀಠದಲ್ಲಿ ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಸ್ವಾಮೀಜಿ ಚುನಾವಣೆ ಸಮೀಪದಲ್ಲಿ ಒಳ ಮೀಸಲಾತಿಗೆ ಕೈಹಾಕಿದ ಬಿಜೆಪಿ. ಸಂವಿಧಾನ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಪ್ರತಿ ಕ್ಷೇತ್ರದಲ್ಲಿ ಲಂಬಾಣಿ ಸಮಾಜ ಬಿಜೆಪಿ.ಯನ್ನು ತಿರಸ್ಕರಿಸಿದ್ದರಿಂದ ಇಂತಹ ಹೀನಾಯ ಸ್ಥಿತಿ ಬಂದೊಗಿದೆ.
ರಾಜ್ಯದಲ್ಲಿ 34 ಲಕ್ಷಕ್ಕೂ ಹೆಚ್ಚು ಬಂಜಾರ ಲಂಬಾಣಿ ಜನಾಂಗದವರಿದ್ದಾರೆ. ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿಯನ್ನು ಜಾರಿಗೊಳಿಸಬಾರದೆಂದು ಮೊದಲಿನಿಂದಲೂ ನಮ್ಮ ಸಮಾಜ ವಿರೋಧಿಸುತ್ತ ಬರುತ್ತಿದ್ದರೂ ನಿರ್ಲಕ್ಷಿಸಿದ್ದರಿಂದ ರೊಚ್ಚಿಗೆದ್ದು ಬಿಜೆಪಿ.ಯನ್ನು ಸೋಲಿಸಿತು. ಉತ್ತರ ಕರ್ನಾಟಕದ ಕಡೆ ಲಂಬಾಣಿ ಸಮಾಜ ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಗುಳೆ ಹೋಗುತ್ತಿದ್ದಾರೆ.
ಮೀಸಲಾತಿ ವರ್ಗಿಕರಣ ನಮ್ಮ ಸಮಾಜಕ್ಕೆ ಧಕ್ಕೆಯಾಗಿದೆ. ರಾಜ್ಯದ 120 ಕ್ಷೇತ್ರಗಳಲ್ಲಿ ಬಂಜಾರ ಸಮಾಜ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ ಕಾಂಗ್ರೆಸ್‍ಗೆ ಬಹುಮತ ದೊರಕಿದೆ. ಕುಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲಬೇಕು. ಸಮಾಜದ ಮಾಜಿ ಸಚಿವರು ಶಾಸಕರುಗಳ ಹೋರಾಟದಿಂದ ಈಡೇರಿದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಯಿಂದ ಸ್ಪರ್ಧಿಸಿ ನಮ್ಮ ಸಮಾಜದಿಂದ ಗೆದ್ದಿರುವ ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ಈ ಬಾರಿಯ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಖಾತೆ ನೀಡಬೇಕು. ಅಹಿಂದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಸ್ವಾಗತಾರ್ಹ.
ದಲಿತರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಕನಸಿದೆ. ಡಾ.ಜಿ.ಪರಮೇಶ್ವರ್ ಸಿ.ಎಂ.ಆಗಲು ಅರ್ಹರಿದ್ದಾರೆ. ತಾಂಡ ಅಭಿವೃದ್ದಿ ನಿಗಮಕ್ಕೆ ನಮ್ಮ ಸಮಾಜದಿಂದ ಚಿಂತಕ, ಹೋರಾಟಗಾರ ಸೂಕ್ತ ವ್ಯಕ್ತಿಯನ್ನು ಗುರುತಿಸಿ ನೇಮಕ ಮಾಡಬೇಕು. ಕನಿಷ್ಠ ಹತ್ತು ಶಾಸಕರಾದರೂ ಆಯ್ಕೆಯಾಗಬೇಕಿತ್ತು. ಆದರೆ ಏಳು ಮಂದಿ ಮಾತ್ರ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದಕ್ಕಾಗಿ ರುದ್ರಪ್ಪ ಲಮಾಣಿಗೆ ಕಾಂಗ್ರೆಸ್ ವರಿಷ್ಠರು ಪವರ್‍ಫುಲ್ ಖಾತೆ ನೀಡಬೇಕೆಂದು ಸ್ವಾಮೀಜಿ ಒತ್ತಡ ಹೇರಿದರು.