ಬೆಂಗಳೂರು: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಕೈಜೋಡಿಸಿದೆ. ಮೈತ್ರಿ ಮಾಡಿಕೊಂಡು ಲೋಕಸಭೆ ಹಾಗೂ ಉಪಚುನಾವಣೆಗಳನ್ನು ಎದುರಿಸಿವೆ. ಮುಂದಿನ ಚುನಾವಣೆಗಳನ್ನು ಎದುರಿಸುವ ಯೋಜನೆ ಹಾಕಿಕೊಂಡಿವೆ. ಆದರೆ ಈ ಮೈತ್ರಿ ಬಗ್ಗೆ ಕಾಂಗ್ರೆಸ್ ಸಚಿವ ಕೃಷ್ಣ ಭೈರೇಗೌಡ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದೇ ವ್ಯವಸ್ಥಿತವಾಗಿ ಜೆಡಿಎಸ್ ಪಕ್ಷವನ್ನು ಮುಗಿಸುವುದಕ್ಕಾಗಿ ಎಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಸಮಾವೇಶ ನಡೆಸಲು ತಯಾರಿ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಮಾವೇಶವನ್ನು ರಾಜಕೀಯ ಪಕ್ಷವಾಗಿ ಮಾಡಲಿ. ಅವರಿಗೆ ಒಳ್ಳೆಯದಾಗಲಿ, ಜೆಡಿಎಸ್ ಪಕ್ಷ ಉಳಿಯಲಿ. ಜನತಾ ದಳ ಉಳಿಯಬೇಕೆಂದು ಆಸೆ ಪಡುತ್ತಿದ್ದೇನೆ. ಈಗ ವ್ಯವಸ್ಥಿತವಾಗಿ ಜನತಾದಳ ಪಕ್ಷವನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೆ. ಈ ಚುನಾವಣೆಯನ್ನೇ ತೆಗೆದುಕೊಳ್ಳಿ, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ತ್ರಿಕೋನವಾಗಿ ಸ್ಪರ್ಧೆ ಮಾಡಿದ್ದಾಗ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧವಾಗಿ 97 ಸಾವಿರ ವೋಟ್ ತೆಗೆದುಕೊಂಡಿದ್ದರು. ಆಮೇಲೆ ಬಿಜೆಪಿ – ದಳ ಒಂದಾದ ಮೇಲೆ 97 ಸಾವಿರ ಇದ್ದದ್ದು 10 ಸಾವಿರ ಜಾಸ್ತೊಯಾಗಬೇಕಿತ್ತು. ಆದರೆ ಅದು ಹೇಗೆ 87,229ಕ್ಕೆ ಇಳಿಯಿತು. ಎಲ್ಲಿ ಹೋಯ್ತು ಬಿಜೆಪಿಯ ವೋಟು..?
ಬಿಜೆಪಿಯ ಒಂದು ವೋಟು ಸಹ ಜನತಾದಳಕ್ಕೆ ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಕುಮಾರಸ್ವಾಮಿ ಅವರ ಮಗನನ್ನು ನಿಲ್ಲಿಸಿಬಿಟ್ಟು, ಬಹುಶಃ ಅವರ ವೋಟುಗಳನ್ನು ಮಾತ್ರ ಕಾಂಗ್ರೆಸ್ ಗೆ ಹಾಕಿಸಿದ್ದಾರೆ. ಇಲ್ಲ ಅಂದ್ರೆ ಹೇಗೆ 97 ಸಾವಿರ ಬರೀ ದಳದ ವೋಟುಗಳು ಇತ್ತು. ಗೆಲ್ಲುವುದು ಬಿಡುವುದು ಆಮೇಲೆ ಆದರೆ ಬಿಜೆಪಿಯವರು ಬೆನ್ನಿಗೆ ಚೂರಿ ಹಾಕದೆ ಇದ್ದರೆ ಬಿಜೆಪಿ ಮತಗಳು ಎಲ್ಲಿ ಹೋಗುತ್ತಿದ್ದವು ಎಂದಿದ್ದಾರೆ.