ದಾವಣಗೆರೆ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಇಂದು ಕೂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ದಾವಣಗೆರೆಯಲ್ಲಿ ಬೃಹತ್ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶ ನಡೆದಿದ್ದು, ಅದ್ದೂರಿಯಾಗಿ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ.
ವಿಜಯಸಂಕಲ್ಪ ಯಾತ್ರೆಯಲ್ಲಿ ಲಕ್ಷಾಂತರ ಕಾರ್ಯಕರ್ತರು ನೆರೆದಿದ್ದರು. ದಾವಣಗೆರೆಯ ಹೆಲಿಪ್ಯಾಡ್ ಆಗಮಿಸಿದ ಮೋದಿ, ತೆರೆದ ವಾಹನದಲ್ಲಿ ವೇದಿಕೆಯ ಬಳಿ ಅಗಮಿಸಿದರು. ದಾರಿಯುದ್ಧಕ್ಕೂ ರೋಡ್ ಶೋ ನಡೆಸಿಕೊಂಡು ಬಂದರು. ಈ ವೇಳೆ ಕಾರ್ಯಕರ್ತರಿಗೆ ಕೈ ಬೀಸಿದರು. ಲಕ್ಷಾಂತರ ಜನರ ನಡುವೆ ಪ್ರಧಾನಿ ಮೋದಿ ರೋಡ್ ಶೋ ನಡೆಯಿತು.
ತೆರೆದ ವಾಹನದಲ್ಲಿ ಪ್ರಧಾನಿ ಆಗಮಿಸುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ಹೂಮಳೆ ಸುರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪಿಸಿದ್ದಾರೆ. “ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ನೋಡಿದೆ. ಆ ವಿಡಿಯೋದಲ್ಲಿ ಕರ್ನಾಟಕದ ನಾಯಕರೊಬ್ಬರು ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿ ಸಂಭ್ರಮಿಸಿದ್ದಾರೆ. ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸಮಾನರು. ಇಲ್ಲಿ ಯಾರು ದೊಡ್ಡವರಲ್ಲ” ಎಂದಿದ್ದಾರೆ.