ಸಿಂದಗಿ: ಕೋವಿಡ್ ಬಂದಾಗ ಯಡಿಯೂರಪ್ಪನವರು 1900 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದರು. ಅದಾದ ನಂತರ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಘೋಷಿಸಿದರು. ನಿಮಗೆ ಈ ಪ್ಯಾಕೇಜ್ ಗಳಿಂದ ಪರಿಹಾರ ಸಿಕ್ಕಿತಾ? ನಿಮ್ಮ ಖಾತೆಗೆ ಹಣ ಬಂತಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನೆಸಿದರು.
ವಿದೇಶಗಳಲ್ಲಿರುವ ಕಪ್ಪುಹಣ ತಂದು ನಿಮ್ಮ ಖಾತೆಗೆ ತಲಾ 15 ಲಕ್ಷ ರು. ಹಾಕುತ್ತೇವೆ ಎಂದಿದ್ದರು. ಆ ಹಣ ನಿಮಗೆ ಬಂತಾ? ಉದ್ಯೋಗ ಸಿಕ್ಕಿತಾ? ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಿಗಳು, ಚಾಲಕರು, ವೃತ್ತಿ ಆಧಾರಿತ ಕಾರ್ಮಿಕರಿಗೆ ಹಣ ಬಂತಾ? ಆಸ್ಪತ್ರೆ ಕೋವಿಡ್ ಚಿಕಿತ್ಸೆ ಬಿಲ್ ಕೊಟ್ಟರಾ? ಸತ್ತವರಿಗೆ ಪರಿಹಾರ ಕೊಟ್ಟರಾ? ಕಷ್ಟದ ಸಮಯದಲ್ಲಿ ನಿಮಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರಾ? ಯಾವುದು ಕೊಟ್ಟಿಲ್ಲ. ಇದನ್ನು ನೀವು ಬಿಜೆಪಿಯವರಿಗೆ ಕೇಳಬೇಕು.
ಬಡವರಿಗೆ ಮನೆ, ನಿವೇಶನ ಕೊಟ್ಟರಾ? ಇದೇ 30 ರಂದು ನಡೆಯುವ ಚುನಾವಣೆಯಲ್ಲಿ ಅಶೋಕ್ ಮನಗೂಳಿ ಅವರಿಗೆ ಮತ ಹಾಕಿ, ಬಿಜೆಪಿ ಸರ್ಕಾರಕ್ಕೆ ನೀವು ಪಾಠ ಕಲಿಸಬೇಕು.
ನಿಮಗೆ ಆಗಿರುವ ನೋವು, ದುಃಖಕ್ಕೆ ಅವರು ಉತ್ತರ ನೀಡಬೇಕು. ನೀವೆಲ್ಲ ನಿಮ್ಮ ಮತದ ಜತೆಗೆ ಹೆಚ್ಚುವರಿಯಾಗಿ ಇತರೆ ಐದು ಜನರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಬೇಕು. ಆಗ ಮಾತ್ರ ಮನಗೂಳಿ ಅವರು 25 ಸಾವಿರ ಮತಗಳ ಅಂತರದಿಂದ ಗೆಲ್ಲಲು ಸಾಧ್ಯ. ಸಿಂದಗಿ ಮಹಾಜನತೆ ಬಹಳ ಪ್ರಜ್ಞಾವಂತರಿದ್ದು, ನೀವು ಈ ಚುನಾವಣೆ ಮೂಲಕ ರಾಜ್ಯ ಹಾಗೂ ದೇಶಕ್ಕೆ ಸಂದೇಶ ನೀಡಿ ಎಂದರು.