ಗಾಂಧಿನಗರ: ಗುಜರಾತ್ ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಮಂದಿಗೆ ಒಂದಷ್ಟು ಭರವಸೆ ನೀಡಿದ್ದಾರೆ. ದೆಹಲಿ ಶಾಲೆಗಳನ್ನು ಸುಧಾರಿಸಿದ ರೀತಿಯಲ್ಲಿ ಇಲ್ಲಿನ ಶಾಲೆಗಳನ್ನು ನಾವೂ ಸುಧಾರಿಸಬಹುದು. ಒಂದು ಅವಕಾಶ ಕೊಡಿ. ಕೊಟ್ಟ ಮಾತಿಗೆ ತಪ್ಪಿದರೆ ನನ್ನನ್ನು ಒದ್ದೋಡಿಸಿ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಪರೀಜ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡಿದೆ. ಗುಜರಾತ್ ನಲ್ಲಿ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಪರೀಕ್ಷೆ ನಡೆಸಲು ನಾನು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಗೆ ಸವಾಲು ಹಾಕಿದ್ದೇನೆ. ಗುಜರಾತ್ ನಲ್ಲಿ 6 ಸಾವಿರ ಸರ್ಕಾರಿ ಶಾಲೆಗಳಿವೆ. ಬಹುಪಾಲು ಶಾಲೆಗಳನ್ನು ಮುಚ್ಚಲಾಗಿದೆ. ಇನ್ನು ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷಾಂತರ ಮಕ್ಕಳ ಭವಿಷ್ಯ ಅಸ್ತವ್ಯಸ್ತವಾಗಿದೆ. ಹೀಗಾಗಿ ನನಗೆ ಒಂದು ಅವಕಾಶ ನೀಡಿ.
ದೆಹಲಿಯ ರೀತಿಯಲ್ಲಿಯೇ ಇಲ್ಲಿಯೂ ಮಾಡುತ್ತೇನೆ. ದೆಹಲಿಯಲ್ಲಿ ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಓದುತ್ತಿದ್ದಾರೆ. ದೆಹಲಿಯಲ್ಲಿ ಈ ಬಾರಿ ಶೇಕಡ 99.7 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ನಾವೂ ಬಡವರ ಜೊತೆ ನಿಲ್ಲುತ್ತೇವೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಶ್ರೀಮಂತರ ಪರ ನಿಂತು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.